×
Ad

ವೆನ್ಲಾಕ್ ಆಸ್ಪತ್ರೆ‌‌ಯಲ್ಲಿ ಕೋವಿಡ್ ಸೋಂಕಿತೆ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ

Update: 2021-05-09 22:54 IST

ಮಂಗಳೂರು : ಕೋವಿಡ್ ಸೋಂಕಿತ ಮಹಿಳೆಯೊಬ್ಬರು ರವಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ವೆನ್ಲಾಕ್ ಆಸ್ಪತ್ರೆಯ ಮುಂದೆ ಪ್ರತಿಭಟಿಸಿದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಮಹಿಳೆ ಮೂರು ದಿನಗಳ ಹಿಂದೆ ಕೋವಿಡ್ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಬೆಳಗ್ಗೆ ಮಹಿಳೆಯು ಸಂಬಂಧಿಕರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿ ‘ನನ್ನನ್ನು ಬೇರೆ ವಾರ್ಡ್‌ಗೆ ಶಿಪ್ಟ್ ಮಾಡುತ್ತಾರೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.  ಆದರೆ ರವಿವಾರ ಸಂಜೆಯ ವೇಳೆಗೆ ಮಹಿಳೆಯು ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಮಹಿಳೆಯ ಸಾವಿಗೆ ವೆನ್ಲಾಕ್ ವೈದ್ಯರ ನಿರ್ಲಕ್ಷ್ಯ ಕಾರಣ’ ಎಂದು ಆರೋಪಿಸಿ ಪ್ರತಿಭಟಿಸಿದರು.

ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಆಕ್ರೋಶಿತರನ್ನು ಸಮಾಧಾನ ಪಡಿಸಿದ್ದಾರೆ. ಈ ಮಧ್ಯೆ ಶಾಸಕರ ವೇದವ್ಯಾಸ ಕಾಮತ್ ಕೂಡ ವೆನ್ಲಾಕ್ ಆಸ್ಪತ್ರೆಗೆ ಧಾವಿಸಿ ವೈದ್ಯರು, ಅಧಿಕಾರಿಗಳು ಹಾಗೂ ಸಂಬಂಧಿಕತ ಜತೆ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.

''ರೋಗಿಯು ನಾಲ್ಕು ದಿನಗಳಿಂದ ವೆಂಟಿಲೇಟರ್ ನಲ್ಲಿದ್ದರು. ಇವತ್ತು ಸಂಜೆ ಮೃತಪಟ್ಟಿದ್ದಾರೆ. ಮನೆಯವರು ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸುತ್ತಿದ್ದಾರೆ.  ಆದರೆ ಕೊರೋನದಿಂದ ರೋಗಿಯ ಶ್ವಾಸಕೋಶಕ್ಕೆ ಗಂಭೀರ ಸಮಸ್ಯೆಗಳಾದಾಗ ನಾವು ಮನೆಯವರಿಗೆ ಮಾಹಿತಿ ನೀಡಿರುತ್ತೇವೆ. ಮನೆಯವರು ತಮ್ಮವರನ್ನು ಕಳೆದು ಕೊಂಡ ದುಃಖದಲ್ಲಿ ಆಕ್ರೋಶಿತರಾಗಿದ್ದಾರೆ. ಆದರೆ ಇದನ್ನು ವೈದ್ಯರ ನಿರ್ಲಕ್ಷ್ಯ ಎಂದು ಹೇಳುವುದು ಸರಿಯಲ್ಲ. 

- ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News