ತಮಿಳುನಾಡು: ಕೊರೋನ ಸೋಂಕಿಗೆ ಗರ್ಭಿಣಿ ವೈದ್ಯೆ ಬಲಿ

Update: 2021-05-09 18:03 GMT

ಮಧುರೈ, ಮೇ 9: ಕೊರೋನ ಸೋಂಕಿನಿಂದ 8 ತಿಂಗಳ ಗರ್ಭಿಣಿ ವೈದ್ಯಕೀಯ ಅಧಿಕಾರಿ ಶನಿವಾರ ಮೃತಪಟ್ಟಿರುವುದು ಜಿಲ್ಲೆಯ ಮುಂಚೂಣಿ ಕಾರ್ಯಕರ್ತರಲ್ಲಿ ಆಘಾತ ಉಂಟು ಮಾಡಿದೆ. 

ಅನುಪ್ಪನಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಪಿ. ಶಣ್ಮುಗಪ್ರಿಯಾ ಅವರಿಗೆ ಎಪ್ರಿಲ್ 28ರಿಂದ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿತ್ತು. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೊರೋನ ನೆಗೆಟಿವ್ ವರದಿ ಬಂದಿತ್ತು. ಎಪ್ರಿಲ್ 30ರಂದು ಅವರು ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದರು. ನಗರದ ಆರೋಗ್ಯಾಧಿಕಾರಿ ಪಿ. ಕುಮಾರಗುರುಬಾರನ್ ಅವರಿಗೆ ರಜೆ ಮಂಜೂರು ಮಾಡಿದ್ದರು. ಮರು ದಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಂದರ್ಭ ಅವರ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. 

ಎರಡು ದಿನಗಳ ಬಳಿಕ ಅವರಲ್ಲಿ ನೋವು ಕಾಣಿಸಿಕೊಂಡಿತ್ತು ಅವರನ್ನು ಸರಕಾರಿ ರಾಜಾಜಿ ಆಸ್ಪತ್ರೆಯ ಹೆರಿಗೆ ಹಾಗೂ ಸ್ತ್ರೀರೋಗದ ವಾರ್ಡ್ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಶನಿವಾರ ಬೆಳಗ್ಗೆ ಅವರ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿತ್ತು. ಅದೇ ದಿನ ಸಂಜೆ 5.30ಕ್ಕೆ ಅವರು ಕೂಡ ಮೃತಪಟ್ಟಿದ್ದಾರೆ. ಈ ಘಟನೆ ಅವರ ಅನೇಕ ಸಹೋದ್ಯೋಗಿಗಳಲ್ಲಿ ಆಘಾತ ಉಂಟು ಮಾಡಿದೆ. ಈ ಬಗ್ಗೆ ಮಾತನಾಡಿರುವ ಹೆಸರು ಹೇಳಲಿಚ್ಛಿಸದ ವೈದ್ಯರೊಬ್ಬರು, ವೈದ್ಯರಾಗಿ ನಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲೇ ಇರಲು ಸಾಧ್ಯವಿಲ್ಲ. ಆದರೆ, ಇತರರ ನಿರ್ಲಕ್ಷದಿಂದ ಮುಂಚೂಣಿ ಕಾರ್ಯಕರ್ತರು ಕಳೆದುಕೊಳ್ಳುವುದನ್ನು ನಮಗೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗದ ವಿರುದ್ಧ ಮುಂಚೂಣಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ ಶಣ್ಮುಗಪ್ರಿಯಾ ಅವರು ಈ ಹಿಂದೆ ಥೇನಿ ಜಿಲ್ಲೆಯ ಚಿನ್ನಮನೂರ್ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದರು. ಅವರು ಮಧುರೈ ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿನಿ. ಅವರ ಕುಟುಂಬದ ಇನ್ನೋರ್ವ ಸದಸ್ಯರು ಕೂಡ ಕೊರೋನ ಸೋಂಕಿಗೆ ಒಳಗಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News