ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ಉತ್ತಮ ಅವಕಾಶವಿದೆ: ಮನ್‌ಪ್ರೀತ್ ಸಿಂಗ್

Update: 2021-05-10 05:21 GMT

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಗರಿಷ್ಠ ಸಾಧನೆ ತೋರುವ ನಿರೀಕ್ಷೆಯಲ್ಲಿರುವ ಭಾರತಕ್ಕೆ ನಾಲ್ಕು ದಶಕಗಳ ಪದಕ ಬರವನ್ನು ನೀಗಿಸುವ ಉತ್ತಮ ಅವಕಾಶ ಇದೆ ಎಂದು ಭಾರತದ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಈ ಹಿಂದೆ ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ. ಕೊನೆಯ ಬಾರಿಗೆ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನ ಜಯಿಸಿತ್ತು.

ಟೋಕಿಯೊ ಒಲಿಂಪಿಕ್ಸ್ ಜುಲೈ 23 ರಿಂದ ಪ್ರಾರಂಭವಾಗಲಿದೆ. ‘‘ನಮ್ಮ ತರಬೇತಿಯನ್ನು ನಾವು ಸರಿಯಾದ ಸಮಯದಲ್ಲಿ ಉತ್ತುಂಗಕ್ಕೇರಿಸುವ ರೀತಿಯಲ್ಲಿ ಯೋಜಿಸಲಾಗಿದೆ ಮತ್ತು ಟೋಕಿಯೊದಲ್ಲಿನ ಬಿಸಿಯಾದ ವಾತಾವರಣಕ್ಕೆ ಹೊಂದಿಕೊಳ್ಳಲು ಭಾರತದ ಆಟಗಾರರು ತಯಾರಾಗಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಕೊರೋನ ವೈರಸ್ ಕಾರಣದಿಂದಾಗಿ ಜರ್ಮನಿ ಮತ್ತು ಸ್ಪೇನ್ ವಿರುದ್ಧದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳನ್ನು ಮುಂದೂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಮನ್‌ಪ್ರೀತ್‌ಹೇಳಿದ್ದಾರೆ.

  ಮುಂದಿನ ವಾರ ತರಬೇತಿ: ಇತ್ತೀಚೆಗೆ ಕೋವಿಡ್-19 ಸೋಂಕು ತಗಲಿರುವ ಎಲ್ಲ ಏಳು ಆಟಗಾರರು ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ವಾರದಿಂದ ತರಬೇತಿಯನ್ನು ಪುನರಾರಂಭಿಸಲಿದ್ದಾರೆ ಎಂದು ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ರಾಣಿ ಮತ್ತು ಸವಿತಾ ಪುನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್, ನವನೀತ್ ಕೌರ್ ಮತ್ತು ಸುಶೀಲಾ ಸೇರಿದಂತೆ ಆರು ಆಟಗಾರ್ತಿಯರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು.

ಆಟಗಾರರಲ್ಲದೆ ಇಬ್ಬರು ಸಹಾಯಕ ಸಿಬ್ಬಂದಿ - ವೀಡಿಯೊ ವಿಶ್ಲೇಷಕ ಅಮೃತಪ್ರಕಾಶ್ ಮತ್ತು ವೈಜ್ಞಾನಿಕ ಸಲಹೆಗಾರ ವೇಯ್ನ ಲೊಂಬಾರ್ಡ್ ಸಹ ಕೊರೋನದಿಂದ ತೊಂದರೆ ಅನುಭವಿಸಿದ್ದರು ಮತ್ತು ಈಗ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News