ಅತಿ ದೊಡ್ಡ ಇಂಧನ ಪೈಪ್ಲೈನ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ: ಅಮೆರಿಕದಲ್ಲಿ ಪ್ರಾದೇಶಿಕ ತುರ್ತು ಪರಿಸ್ಥಿತಿ ಘೋಷಣೆ

Update: 2021-05-10 16:51 GMT

ವಾಶಿಂಗ್ಟನ್, ಮೇ 10: ಅಮೆರಿಕದ ಅತಿ ದೊಡ್ಡ ಇಂಧನ ಪೈಪ್ಲೈನ್ ವ್ಯವಸ್ಥೆಯು ಸೈಬರ್ ದಾಳಿಗೆ ಒಳಗಾಗಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ, ಅಮೆರಿಕ ಸರಕಾರ ರವಿವಾರ ಪ್ರಾದೇಶಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಸೈಬರ್ ದಾಳಿ ನಡೆದಿರುವುದನ್ನು ಎರಡು ದಿನಗಳ ಹಿಂದೆ ಪತ್ತೆಹಚ್ಚಲಾಗಿತ್ತು.
ಕೊಲೋನಿಯಲ್ ಪೈಪ್ಲೈನ್ ಕಂಪೆನಿಯು ಟೆಕ್ಸಾಸ್ ಕೊಲ್ಲಿ ಕರಾವಳಿಯಿಂದ ಪೆಟ್ರೋಲ್ ಮತ್ತು ವಿಮಾನ ಇಂಧನವನ್ನು 5,500 ಮೈಲಿ (8,850 ಕಿಲೋಮೀಟರ್) ಪೈಪ್ಲೈನ್ ಮೂಲಕ ಜನಭರಿತ ಪೂರ್ವ ಕರಾವಳಿಗೆ ಸಾಗಿಸುತ್ತದೆ. ಸುಮಾರು 5 ಕೋಟಿ ಬಳಕೆದಾರರು ಇದರ ಪ್ರಯೋಜನ ಪಡೆಯುತ್ತಾರೆ.

ರ್ಯಾನ್ಸಮ್ವೇರ್ ಎಂಬ ದಾಳಿ ಸಾಫ್ಟ್ವೇರ್ ಮೂಲಕ ತನ್ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಕಂಪೆನಿ ಹೇಳಿದೆ. ದಾಳಿಯಿಂದಾಗಿ ಕಂಪೆನಿಯ ಕಂಪ್ಯೂಟರ್ ವ್ಯವಸ್ಥೆಯು ಸಾಂಕೇತಿಕ ಭಾಷೆಗೆ ಪರಿವರ್ತನೆಗೊಂಡಿದ್ದು, ಅದನ್ನು ಮೂಲ ಸ್ಥಿತಿಗೆ ತರಲು ಸೈಬರ್ ದಾಳಿಕೋರರಿಗೆ ಹಣ ಪಾವತಿಸಬೇಕಾಗುತ್ತದೆ.

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ಮತ್ತು ಇತರ ಪರಿಷ್ಕೃತ ಪೆಟ್ರೋಲಿಯಂ ಉತ್ಪನ್ನಗಳ ತುರ್ತು ಸಾಗಣೆಗೆ ಪರ್ಯಾಯ ವಿಧಾನಗಳನ್ನು ರೂಪಿಸಲಾಗುತ್ತದೆ ಹಾಗೂ ಅಗತ್ಯವಿರುವ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತುರ್ತು ಪರಿಸ್ಥಿತಿ ಘೋಷಣೆಯು ಇಂಧನವನ್ನು ರಸ್ತೆ ಮೂಲಕ ಬಾಧಿತ ರಾಜ್ಯಗಳಿಗೆ ಕಳುಹಿಸಲು ಅವಕಾಶ ನೀಡುತ್ತದೆ. ಇಂಧನ ಪೈಪ್ಲೈನ್ ವ್ಯವಸ್ಥೆ ಮುರಿದುಬಿದ್ದಿರುವುದರಿಂದ ಅಲಬಾಮ, ಅರ್ಕಾನ್ಸಸ್, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ, ಡೆಲವೇರ್, ಫ್ರೋರಿಡ, ಜಾರ್ಜಿಯ, ಕೆಂಟಕಿ, ಲೂಸಿಯಾನ, ಮೇರಿಲ್ಯಾಂಡ್, ಮಿಸಿಸಿಪ್ಪಿ, ನ್ಯೂಜರ್ಸಿ, ನ್ಯೂಯಾರ್ಕ್, ನಾರ್ತ್ ಕ್ಯಾರಲೈನ, ಪೆನ್ಸಿಲ್ವೇನಿಯ, ಸೌತ್ ಕ್ಯಾರಲೈನ, ಟೆನೆಸೀ, ಟೆಕ್ಸಾಸ್ ಮತ್ತು ವರ್ಜೀನಿಯ ರಾಜ್ಯಗಳ ಇಂಧನ ಪೂರೈಕೆ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News