ಕಾರ್ಕಳದಲ್ಲಿ ಆಕ್ಸಿಜನ್ ಉತ್ಪಾದನ ಘಟಕ ನಿರ್ಮಾಣ - ಸುನಿಲ್ ಕುಮಾರ್

Update: 2021-05-10 17:33 GMT

ಕಾರ್ಕಳ : ಕೊರೋನ 2ನೇ ಅಲೆಯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಸರಕಾರ ಅದರ ನಿಯಂತ್ರಣಕ್ಕೆ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಈ ಸಂದರ್ಭದಲ್ಲಿ ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವುದು ಕಷ್ಟ ಸಾಧ್ಯವಾಗಿದ್ದು ಸಾರ್ವಜನಿಕರ ಸಹಕಾರವು ಅತ್ಯಗತ್ಯವಾಗಿದೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು. 

ಕಾರ್ಕಳದಲ್ಲಿ ಯಾವ ರೋಗಿಯು ಆಕ್ಸಿಜನ್ ಕೊರತೆಯಿಂದ ಬಳಲಬಾರದು ಎಂಬ ಆಶಯದಿಂದ ಸ್ಥಳೀಯವಾಗಿಯೇ ಆಕ್ಸಿಜನ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಈ ಘಟಕ 1 ಘಂಟೆಗೆ 18, 000 ಲೀ. ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆಕ್ಸಿಜನ್ ಅಗತ್ಯವಿರುವ ರೋಗಿಗಳು ದಾಖಲಾದರೆ ಈ ಒಂದೇ ಘಟಕದಿಂದ ಇಡೀ ಆಸ್ಪತ್ರೆಯನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿಸಿದರು. 

ನೆರವು

ನಿರ್ಮಾಣ ಘಟಕದ ಯಂತ್ರೋಪಕರಣದ ವೆಚ್ಚವನ್ನು ಉಡುಪಿಯ ಜಿ. ಶಂಕರ್ ಫೌಂಡೇಶನ್, ಉಳಿದ ಸಿವಿಲ್ ಹಾಗೂ ಇನ್ನಿತರ ಖರ್ಚುಗಳನ್ನು ಕರ್ನಾಟಕ ಕ್ಯಾಶ್ಯೂ ಮನುಫ್ಯಾಕ್ಚರಿಂಗ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಕೆ.ಎಸ್. ನಿಸಾರ್ ಅಹಮ್ಮದ್ (ದುಬೈ) ಭರಿಸಲಿದ್ದಾರೆ. ಕೋವಿಡ್ ನಿರ್ವಹಣೆ ಹಾಗೂ ಆಸ್ಪತ್ರೆಯ ಇತರ ನಿರ್ವಹಣೆಗೆ ಇನ್ನಷ್ಟು ದಾನಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಶಾಸಕರು ಹೇಳಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 34,842 ಜನರು ಮೊದಲ ಹಂತದ ಲಸಿಕೆಯನ್ನು, 9,345 ಜನರು 2ನೇ ಹಂತದ ಲಸಿಕೆಯನ್ನು ಪಡೆದಿರುತ್ತಾರೆ. ಈವರೆಗೆ ಸರಕಾರಿ ಆಸ್ಪತ್ರೆಯಲ್ಲಿ 5 ವೆಂಟೀಲೇಟರ್ ವ್ಯವಸ್ಥೆಯಿದ್ದು, ತಕ್ಷಣಕ್ಕೆ ಹೆಚ್ಚುವರಿ 2 ವೆಂಟೀಲೇಟರ್ ವ್ಯವಸ್ಥೆಯ ಬೆಡ್‍ಗಳನ್ನು ಖರೀದಿ ಮಾಡಲಾಗಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 4 ಮಂದಿ ವೈದ್ಯರು ಮತ್ತು 8 ಜನ ಶುಶ್ರೂಷಕಿಯರನ್ನು ನೇಮಕ ಮಾಡಲಾಗಿದ್ದು, ಕೋವಿಡ್ ಕಾರಣದಿಂದಾಗಿ ಕಾರ್ಕಳದ ಜನತೆಗೆ ಯಾವುದೇ ತೊಂದರೆಗಳು ಆಗದಂತೆ ಉತ್ತಮ ವ್ಯವಸ್ಥೆಗೆ ಎಲ್ಲಾ ಪ್ರಯತ್ನಗಳನ್ನು ಕಲ್ಪಿಸಲಾಗುತ್ತಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News