ಐಪಿಎಲ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲಿ ಆಡಲಾಗುವುದಿಲ್ಲ: ಬಿಸಿಸಿಐ

Update: 2021-05-11 05:18 GMT

 ಹೊಸದಿಲ್ಲಿ: ಕೊರೋನ ಕಾರಣದಿಂದಾಗಿ ಅರ್ಧದಲ್ಲಿ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ದೇಶದ ಹೊರಗೆ ಆಡಬೇಕಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

 ಬಾಕಿ ಇರುವ 31 ಪಂದ್ಯಗಳನ್ನು ಒಂದೇ ಕಡೆ ಆಡಲಾಗುತ್ತದೆಯೋ ಎನ್ನುವುದು ಸ್ಪಷ್ಟಗೊಂಡಿಲ್ಲ.

  ಭಾರತದಲ್ಲಿ ಉಳಿದ ಪಂದ್ಯಗಳನ್ನು ನಡೆಸುವುದು ಅಸಾಧ್ಯವೆಂದು ಸ್ಪೋರ್ಟ್ಸ್‌ಸ್ಟಾರ್ ನಿಯತಕಾಲಿಕೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗುಲಿ ಮಾಹಿತಿ ನೀಡಿದ್ದಾರೆ.

 ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ 13ನೇ ಆವೃತ್ತಿಯ ಎಲ್ಲ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಗಿತ್ತು. ಜುಲೈನಲ್ಲಿ ಭಾರತವು ಮೂರು ಏಕದಿನ ಮತ್ತು ಐದು ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ ಎಂದು ಗಂಗುಲಿ ಹೇಳಿದ್ದಾರೆ. ಆದರೆ ಬಿಸಿಸಿಐ ಎರಡನೇ ಸ್ಟ್ರಿಂಗ್ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

  ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಜೂನ್ ಆರಂಭದಲ್ಲಿ ಇಂಗ್ಲೆಂಡ್‌ಗೆ ತೆರಳಲಿದೆ. ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News