ಪ್ರತ್ಯೇಕ ನಿಯಮಗಳಿಂದ ಜನರನ್ನು ಗೊಂದಲಕ್ಕೆ ದೂಡಬೇಡಿ : ದ.ಕ. ಜಿಲ್ಲಾಡಳಿತಕ್ಕೆ ರಮಾನಾಥ ರೈ ಸಲಹೆ

Update: 2021-05-11 08:19 GMT

ಬಂಟ್ವಾಳ, ಮೇ 10: ಕೊರೋನ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರದ ಮಾರ್ಗಸೂಚಿಯನ್ನೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿ ಮಾಡ ಬೇಕು ಹೊರತು ದಿನಕ್ಕೊಂದು ಪ್ರತ್ಯೇಕ ನಿಯಮಗಳನ್ನು ಜಾರಿ ಮಾಡಿ ಜನರನ್ನು ಗೊಂದಲಕ್ಕೆ ದೂಡಬೇಡಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಲಾಕ್ ಡೌನ್ ಬಡವರು ಮತ್ತು ಮಧ್ಯಮ ವರ್ಗದ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜನರು ಈಗಾಗಲೇ ತೀವ್ರ ಸಂಕಷ್ಟ ದಲ್ಲಿ ಇದ್ದಾರೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ನಿಯಮಗಳನ್ನು ಮಾಡುವುದರಿಂದ ಜನರು ಇನ್ನಷ್ಟು ತೊಂದರೆಗೆ ಒಳಗಾಗುತ್ತಿ ದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ಕಡಿಮೆ ಸಮಯ ನೀಡಿರುವುದರಿಂದ ಮಾರುಕಟ್ಟೆ, ಅಂಗಡಿಗಳಲ್ಲಿ ಜನಜಂಗುಲಿ ಸೇರುತ್ತಿದೆ. ಇದರಿಂದ ವೈರಸ್ ಇನ್ನಷ್ಟು ಹರಡುವ ಅಪಾಯ ಇದೆ ಎಂದು ತಿಳಿಸಿರುವ ಅವರು, ಮೀನು ಮಾರಾಟಗಾರರಿಗೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಮೀನು ಮಾರಾಟ ಮಾಡಲು ಅವಕಾಶ ನೀಡಿ ಮನವಿ ಮಾಡಿದ್ದಾರೆ.

ಕೊರೋನ ವಿರುದ್ಧದ ಹೋರಾಟಕ್ಕೆ ಜಿಲ್ಲೆಯ ಮುಖಂಡರು, ತಜ್ಞರು, ಸೇವಾ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಹೋರಾಟ ಮಾಡುವ ಅಗತ್ಯ ಇದೆ. ಸಂಘಟಿತ ಹೋರಾಟ ಮಾಡಿದರೆ ಮಾತ್ರ ಕೊರೋನ ಸೋಂಕನ್ನು ನಿಯಂತ್ರಿ ಸಲು ಸಾಧ್ಯ ಎಂದಿದ್ದಾರೆ.

ಜಿಲ್ಲೆಯ ಜನರಿಗೆ ತೊಂದರೆ ನೀಡುವ ಎಲ್ಲಾ ನಿಯಮಗಳನ್ನು ಜಿಲ್ಲಾಡಳಿತ ವಾಪಸ್ ಪಡೆಯಬೇಕು. ರಾಜ್ಯ ಸರಕಾರ ಹೊರಡಿಸಿರುವ ಲಾಕ್ ಡೌನ್ ಮಾರ್ಗಸೂಚಿಯನ್ನೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಾರಿ ಮಾಡಬೇಕು ಎಂದು ರಮಾನಾಥ ರೈ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News