ಮೌಂಟ್‌ ಎವರೆಸ್ಟ್‌ ನ ನೂತನ ಎತ್ತರವನ್ನು ಏರಿದ ಬಹರೈನ್‌ ರಾಜಕುಮಾರ ನೇತೃತ್ವದ ತಂಡ: ದಾಖಲೆ ಸೃಷ್ಟಿ

Update: 2021-05-11 08:38 GMT
photo: thehimalayantimes

ಕಠ್ಮಂಡು: ಬಹ್ರೈನ್‌ ರಾಜಕುಮಾರ ಮುಹಮ್ಮದ್‌ ಹಾಮದ್‌ ಮುಹಮ್ಮದ್‌ ಅಲ್‌ ಖಲೀಫಾ ನೇತೃತ್ವದ 16 ಸದಸ್ಯರ ಬಹ್ರೈನ್‌ ರಾಯಲ್‌ ಗಾರ್ಡ್‌ ತಂಡವು ಇಂದು ಎವರೆಸ್ಟ್‌ ಶಿಖರದ ನೂತನ ಎತ್ತರವನ್ನು ಏರಿದ ಮೊದಲ ಅಂತಾರಾಷ್ಟ್ರೀಯ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಂದು ಮುಂಜಾನೆ ಬಹ್ರೈನ್ ರಾಯಲ್ ಗಾರ್ಡ್ ತಂಡವು ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ತಲುಪಿದೆ ಎಂದು ದಿ ಹಿಮಾಲಯನ್ ಟೈಮ್ಸ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.‌

ಸ್ಥಳೀಯ ಸಮಯ ಬೆಳಗ್ಗೆ ೫:೩೦ರಿಂದ ೬:೪೫ರ ಮಧ್ಯೆ ಈ ತಂಡವು ಮೌಂಟ್‌ ಎವರೆಸ್ಟ್‌ ನ ಉತ್ತುಂಗಕ್ಕೇರಿತು ಎಂದು ಈ ಯಾತ್ರೆಯನ್ನು ಆಯೋಜಿಸಿದ ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ಹೇಳಿದರು. ಮೌಂಟ್‌ ಎವರಸ್ಟ್‌ ನ ಹೊಸ ಎತ್ತರವನ್ನೇರಿದ ಮೊದಲ ಅಂತಾರಾಷ್ಟ್ರೀಯ ತಂಡ ಇದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಮೀರಾ ಆಚಾರ್ಯ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ ನಲ್ಲಿ ನೇಪಾಳ ಮತ್ತು ಚೀನಾ ಜಂಟಿಯಾಗಿ ವಿಶ್ವದ ಅತೀ ಎತ್ತರದ ಶಿಖರವಾಗಿರುವ ಮೌಂಟ್‌ ಎವರೆಸ್ಟ್‌ ನ ಪರಿಷ್ಕೃತ ಎತ್ತರವು 8,848.86 ಮೀಟರ್ ಎಂದು ಘೋಷಿಸಿತು, ಇದು 1954 ರಲ್ಲಿ ಭಾರತ ಮಾಡಿದ ಹಿಂದಿನ ಅಳತೆಗಿಂತ ಸುಮಾರು 86 ಸೆಂಟಿಮೀಟರ್ ಹೆಚ್ಚಾಗಿದೆ. 2015 ರ ಭೀಕರ ಭೂಕಂಪ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಅದರ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂಬ ಚರ್ಚೆಗಳ ನಡುವೆ ನೇಪಾಳ ಸರ್ಕಾರ ಪರ್ವತದ ನಿಖರವಾದ ಎತ್ತರವನ್ನು ಅಳೆಯಲು ನಿರ್ಧರಿಸಿತ್ತು.

ಎವರೆಸ್ಟ್‌ ಯಾತ್ರೆಯನ್ನು ಪ್ರಾರಂಭಿಸಲು ಬಹ್ರೈನ್‌ ರಾಜಕುಮಾರ ನೇತೃತ್ವದ ತಂಡವು ಮಾರ್ಚ್‌ 15ರಂದು ನೇಪಾಳದ ಕಠ್ಮಂಡುವಿಗೆ ಆಗಮಿಸಿತ್ತು. 2೦೧೩ರಲ್ಲಿ ಆಮ್ಲಜನಕದ ಬೆಂಬಲವಿಲ್ಲದೇ ಎವರೆಸ್ಟ್‌ ಏರಿದ ಅತಿ ಕಿರಿಯ ವ್ಯಕ್ತಿ ಎಂಬ ಖ್ಯಾತಿ ಹೊಂದಿದ್ದ ತಾಶಿ ಲಕ್ಪಾ ಶೆರ್ಪಾ ತಂಡದ ನೇತೃತ್ವ ವಹಿಸಿದ್ದು, ಸದ್ಯ ತಂಡವು ಕೆಳಗಿಳಿಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮೌಂಟ್‌ ಎವರೆಸ್ಟ್‌ ಏರಿ ನಿಂತ ಮೊದಲ ಬಹ್ರೈನ್‌ ತಂಡ ಇದಾಗಿದೆ ಎಂದು ಅವರು ಹೇಳಿದರು.

ಇದೇ ತಂಡವು 2020ರ ಅಕ್ಟೋಬರ್‌ ನಲ್ಲಿ ಲೊಬುಚೆ ಶಿಖರ (6,119 ಮೀಟರ್) ಮತ್ತು ಮೌಂಟ್ ಮನಸ್ಲು (8,156 ಮೀಟರ್) ಶಿಖರಗಳನ್ನು ನೇಪಾಳದಲ್ಲಿ ಯಶಸ್ವಿಯಾಗಿ ಏರಿತ್ತು. ರಾಯಲ್ ಗಾರ್ಡ್ ಆಫ್ ಬಹ್ರೇನ್ ಬಹ್ರೇನ್ ರಕ್ಷಣಾ ಪಡೆಯ ಒಂದು ಘಟಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News