ತ್ರಿಪುರಾ ಮಾಜಿ ಸಿಎಂ ಮಾಣಿಕ್ ಸರ್ಕಾರ್, ಸಿಪಿಎಂ ನಾಯಕರ ಮೇಲೆ ದಾಳಿ; ಬಿಜೆಪಿ ವಿರುದ್ಧ ಆರೋಪ
ಅಗರ್ತಲ: ರಾಜ್ಯದಲ್ಲಿ ಬೆದರಿಕೆಯ ಸಂಸ್ಕೃತಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಂತ್ಯಗೊಂಡಿದೆ ಎಂದು ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ ಒಂದೇ ವಾರದಲ್ಲಿ ರಾಜ್ಯದಲ್ಲಿ ವಿಪಕ್ಷ ಸಿಪಿಎಂ ನಾಯಕ ಹಾಗೂ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಅವರ ಮೇಲೆ ದಕ್ಷಿಣ ತ್ರಿಪುರಾ ಜಿಲ್ಲೆಯ ಸಂತಿರ್‍ಬಝಾರ್ ಎಂಬಲ್ಲಿ ಬಿಜೆಪಿ ಕಾರ್ಯಕರ್ತರೆಂದು ತಿಳಿಯಲಾದವರಿಂದ ದಾಳಿ ನಡೆದಿದೆ.
ಸರ್ಕಾರ್ ಅವರು ವಿಪಕ್ಷ ನಾಯಕ ಬಾದಲ್ ಚೌಧುರಿ ಹಾಗೂ ಶಾಸಕ ಸುಧಾಮ್ ದಾಸ್ ಮತ್ತಿತರರ ಜತೆ ಇತ್ತೀಚೆಗೆ ದಾಳಿಗೊಳಗಾಗಿದ್ದ ಪಕ್ಷ ಕಾರ್ಯಕರ್ತರನ್ನು ಭೇಟಿಯಾಗಲೆಂದು ತೆರಳುತ್ತಿದ್ದಾಗ ಸೋಮವಾರ ಅವರ ಮೇಲೆ ಹಲ್ಲೆ ನಡೆದಿದೆ.
ಸಿಪಿಎಂ ಶಾಸಕರು ತಮ್ಮ ವಾಹನಗಳಲ್ಲಿ ಸಂತಿರ್‍ಬಝಾರ್ ತಲುಪುತ್ತಿದ್ದಂತೆ ಅಲ್ಲಿ ಸೇರಿದ್ದ ನೂರಾರು ಜನರು `ಗೋ ಬ್ಯಾಕ್ ಮಾಣಿಕ್ ಸರ್ಕಾರ್' ಎಂಬ ಘೋಷಣೆಗಳನ್ನು ಕೂಗುತ್ತಾ ಆಗಮಿಸಿದ್ದ ನಾಯಕರ ಮೇಲೆ ಕಲ್ಲು ಹಾಗೂ ಬಾಟಲಿಗಳನ್ನು ಎಸೆದಿದ್ದಾರೆ.
"ರಾಜ್ಯದ ಆಡಳಿತ ಪಕ್ಷದ ನಾಯಕತ್ವದ ಪ್ರಚೋದನೆಯಿಂದ ಸರಣಿ ದಾಳಿಗಳು ನಡೆದಿವೆ ಇದು ಅಸ್ವೀಕಾರಾರ್ಹ" ಎಂದು ಘಟನೆ ನಂತರ ಸರ್ಕಾರ್ ಹೇಳಿದ್ದಾರೆ.
ಘಟನೆಯ ವೀಡಿಯೋ ವೈರಲ್ ಆಗಿದ್ದು ದಾಳಿ ವೇಳೆ ಬಾದಲ್ ಚೌಧುರಿ ಹಾಗೂ ಕೆಲವು ಮಂದಿ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.