ಕುವೈತ್‌ನಿಂದ ಮತ್ತೆ ಭಾರತಕ್ಕೆ ಆಕ್ಸಿಜನ್ ಪೂರೈಕೆ : ನವಮಂಗಳೂರು ಬಂದರು ತಲುಪಿದ ನೌಕಾಪಡೆ ಹಡಗು
ಮಂಗಳೂರು, ಮೇ 11: ಕುವೈತ್ ಸರಕಾರವು ಮತ್ತೆ ಭಾರತಕ್ಕೆ ಆಕ್ಸಿಜನ್ ಪೂರೈಕೆ ಮಾಡಿದ್ದು, ಮಂಗಳವಾರ ನವ ಮಂಗಳೂರು ಬಂದರು ತಲುಪಿದೆ.
ಕುವೈತ್ ಸರಕಾರದಿಂದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮೂಲಕ ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ನೀಡುತ್ತಿರುವ ಎರಡನೇ ಹಂತದ ಕೊಡುಗೆ ಇದಾಗಿದೆ. ಐಎನ್‌ಎಸ್ ಕೊಚ್ಚಿ ಹಾಗೂ ಐಎನ್‌ಎಸ್ ತಬರ್ ಎಂಬ ಎರಡು ಯುದ್ಧ ನೌಕೆಗಳು ಕುವೈತ್‌ನಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಜೊತೆ ಬಂದಿದ್ದು, ನವಮಂಗಳೂರು ಬಂದರು ಮಂಡಳಿಯು ಅವುಗಳನ್ನು ಸ್ವೀಕರಿಸಿತು.
ಐಎನ್‌ಎಸ್ ಕೊಚ್ಚಿಯಲ್ಲಿ ತಲಾ 20 ಮೆಟ್ರಿಕ್ ಟನ್ ಆಕ್ಸಿಜನ್‌ನ ಮೂರು ಐಸೋ ಟ್ಯಾಂಕ್, 40ರಷ್ಟು ಆಕ್ಸಿಜನ್ ತಲಾ 1 ಟನ್‌ನ ಸಿಲಿಂಡರ್‌ಗಳು ಮತ್ತು 10 ಲೀಟರ್ ಹೈಫ್ಲೋ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳಿದ್ದವು. ಐಎನ್‌ಎಸ್ ತಬರ್‌ನಲ್ಲಿ ತಲಾ 20 ಮೆಟ್ರಿಕ್ ಟನ್ ಆಕ್ಸಿಜನ್‌ನ 2 ಐಸೋ ಟ್ಯಾಂಕ್, 30ರಷ್ಟು ಆಕ್ಸಿಜನ್ ತಲಾ1 ಟನ್‌ನ ಸಿಲಿಂಡರ್‌ಗಳಿದ್ದವು.
ಸಮುದ್ರ ಸೇತು-2ನೇ ಕಾರ್ಯಾಚರಣೆ ಭಾಗವಾಗಿ ಭಾರತೀಯ ನೌಕಾಪಡೆ ಹಡಗುಗಳು ವಿದೇಶಗಳಿಂದ ಆಕ್ಸಿಜನ್ ಮತ್ತಿತರ ವೈದ್ಯಕೀಯ ನೆರವನ್ನು ಹೇರಿಕೊಂಡು ಬರುತ್ತಿವೆ. ಮಂಗಳೂರಿಗೆ ಒಟ್ಟು 4 ಹಡಗುಗಳು ಆಕ್ಸಿಜನ್ ಸಹಿತ ಬಂದಿವೆ. ಈ ಸಂದರ್ಭ ಎನ್‌ಎಂಪಿಟಿ ಅಧ್ಯಕ್ಷ ಡಾ.ಎ.ವಿ.ರಮಣ, ಉಪಾಧ್ಯಕ್ಷ ಕೆ.ಜಿ.ನಾಥ್ ಮತ್ತಿತರರಿದ್ದರು.