ಅನಿರುದ್ಧ ಸನ್ಯಾಸಾಶ್ರಮ ಸ್ವೀಕಾರ ಪ್ರಕ್ರಿಯೆ ಪ್ರಾರಂಭ

Update: 2021-05-11 14:32 GMT

ಉಡುಪಿ, ಮೇ 11: ಶೀರೂರು ಮಠದ ಉತ್ತರಾಧಿಕಾರಿಯಾಗಿ ನೇಮಕ ಗೊಂಡಿರುವ ಉಡುಪಿಯ ಅನಿರುದ್ಧ ಸರಳತ್ತಾಯರ ಸನ್ಯಾಸಾಶ್ರಮ ಸ್ವೀಕಾರ ಕಾರ್ಯಕ್ರಮ ಹಾಗೂ ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳು ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿ ಯಲ್ಲಿ ಮಂಗಳವಾರ ಹಿರಿಯಡ್ಕ ಸಮೀಪದ ಶೀರೂರು ಮೂಲಮಠದಲ್ಲಿ ಪ್ರಾರಂಭಗೊಂಡಿತು.

ಅನಿರುದ್ಧ ಸರಳತ್ತಾಯ ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಮೇ 14ರಂದು ನಿಯೋಜನೆಗೊಳ್ಳಲಿದ್ದು, ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ, ವಟುವಿಗೆ ಫಲ ಪ್ರದಾನ ಹಾಗೂ ವಿವಿಧ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು, ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳು ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಇಂದು ನಡೆಯಿತು.

ಅವಧಾನಿ ಸುಬ್ರಹ್ಮಣ್ಯ ಭಟ್ಟ ಹಾಗೂ ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸೋದೆ ವಾದಿ ರಾಜ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ ಹಾಗೂ ವಟುವಿನ ಪೋಷಕರಾದ ವಿದ್ವಾನ್ ಉದಯಕುಮಾರ ಸರಳತ್ತಾಯ ಮತ್ತು ಶ್ರೀವಿದ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News