ಮಲ್ಪೆ ಬಂದರಿನಲ್ಲಿ ಸಾರ್ವಜನಿಕರಿಗೆ ಮೀನು ಮಾರಾಟ ನಿಷೇಧ: ಅಪರ ಜಿಲ್ಲಾಧಿಕಾರಿ

Update: 2021-05-11 14:39 GMT

ಉಡುಪಿ, ಮೇ 11: ಕೋವಿಡ್ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನೊಳಗೆ ಚಿಲ್ಲರೆ ಮೀನು ವ್ಯಾಪಾರ ಮಾಡಲು ಅವಕಾಶವಿಲ್ಲ. ಕೇವಲ ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶವಿದ್ದು, ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ತಿಳಿಸಲಾಗಿದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಆದರೂ ಸಹ ಮಲ್ಪೆ ಬಂದರಿನ ಒಳಗೆ ಗ್ರಾಹಕರು ಮೀನು ಖರೀದಿಗಾಗಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಬಗ್ಗೆ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಇಂದು ಅಧಿಕಾರಿಗಳೊಂದಿಗೆ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಹಕರು ಮೀನು ಖರೀದಿಗೆ ಮಲ್ಪೆ ಬಂದರಿಗೆ ಹೋಗದಂತೆ ತಡೆಯಲು, ತಪಾಸಣೆಯನ್ನು ಬಿಗಿಗೊಳಿಸಲು ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಆದರೂ ಕಾನೂನು ಬಾಹಿರವಾಗಿ ಸಾರ್ವಜನಿಕರು ಮೀನು ಖರೀದಿಗೆ ಬಂದರಿಗೆ ಬಂದಲ್ಲಿ ಅಂತಹವರ ವಿರುದ್ಧ ದೂರು ದಾಖಲಿಸಲಾ ಗುವುದು ಹಾಗೂ ಅವರ ವಾಹನವನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಸಾರ್ವಜನಿಕರು ತಮ್ಮ ತಮ್ಮ ಮನೆ ಸಮೀಪದ ಮಾರುಕಟ್ಟೆಗಳಿಂದಲೇ ಮೀನುಗಳನ್ನು ಖರೀದಿಸಲು ಅಥವಾ ಮನೆಮನೆಗೆ ಮೀನು ಮಾರಾಟ ಮಾಡಿಕೊಂಡು ಬರುವವರ ಬಳಿ ಮೀನು ಖರೀದಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು ಈ ವಿಷಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಶಿವಕುಮಾರ್, ಮಲ್ಪೆ ಪೊಲೀಸ್ ಉಪನಿರೀಕ್ಷಕ ಶಕ್ತಿವೇಲು, ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸುಷ್ಮಾ ಮುಂತಾದವರು ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News