ಉಡುಪಿ: ಕೋವಿಡ್‌ಗೆ ಮತ್ತೆ ಮೂವರು ಬಲಿ; 1084 ಮಂದಿಗೆ ಕೊರೋನ ಪಾಸಿಟಿವ್

Update: 2021-05-11 14:57 GMT

ಉಡುಪಿ, ಮೇ 11: ಮಂಗಳವಾರ ಕೋವಿಡ್-19 ಸೋಂಕಿನಿಂದ ಜಿಲ್ಲೆ ಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 239ಕ್ಕೇರಿದೆ. ದಿನದಲ್ಲಿ 1084 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿಂದು 787 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 6876 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಮಂಗಳವಾರ ಮೃತಪಟ್ಟ ಮೂವರಲ್ಲಿ 72 ಮತ್ತು 67 ವರ್ಷ ಪ್ರಾಯದ ಇಬ್ಬರು ವೃದ್ಧರು ಕುಂದಾಪುರದವರಾಗಿದ್ದು ಮೇ 9 ಮತ್ತು 10ರಂದು ಮೃತಪಟ್ಟರೆ, 48 ವರ್ಷದ ಮಹಿಳೆ ಉಡುಪಿಯವರಾಗಿದ್ದು ಸೋಮವಾರ ನಿಧನರಾದರು. ಮೂವರು ಕೋವಿಡ್‌ನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ತೀವ್ರ ಉಸಿರಾಟ ತೊಂದರೆ, ನ್ಯೂಮೋನಿಯಾದಿಂದ ಬಳಲುತಿದ್ದರು.

ಮಂಗಳವಾರ ಪಾಸಿಟಿವ್ ಬಂದ 1084 ಮಂದಿಯಲ್ಲಿ 568 ಮಂದಿ ಪುರುಷರು ಹಾಗೂ 516 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 519, ಕುಂದಾಪುರ ತಾಲೂಕಿನ 388 ಹಾಗೂ ಕಾರ್ಕಳ ತಾಲೂಕಿನ 169 ಮಂದಿ ಇದ್ದು, ಉಳಿದ ಎಂಟು ಮಂದಿ ವಿವಿಧ ಕಾರಣಗಳ ಮೇಲೆ ಉಡುಪಿ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ.

ಸೋಮವಾರ 787 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 34,702 ಕ್ಕೇರಿದೆ. ನಿನ್ನೆ ಜಿಲ್ಲೆಯ 3094 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿ ದ್ದಾರೆ. ಇಂದಿನ 1084 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 41,817 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,34,106 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News