ಅಮಾಯಕ ರೋಗಿಗಳ ಸಾವಿನಲ್ಲೂ ಶಾಸಕ ಕಾಮತ್‌ಗೆ ಪ್ರಚಾರದ ತೆವಲು: ಜೆ. ಆರ್.ಲೋಬೊ ಆರೋಪ
ಮಂಗಳೂರು, ಮೇ 11: ಮಾರಣಾಂತಿಕ ರೋಗವಾಗಿ ಪರಿಣಮಿಸಿರುವ ಕೋವಿಡ್ ಸೋಂಕಿನ ಎರಡನೇ ಅಲೆಯು ಶರವೇಗದಲ್ಲಿ ಪಸರಿಸುತ್ತಾ ಅಮಾಯಕ ರೋಗಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅಮಾಯಕ ರೋಗಿಗಳ ಸಾವಿನಲ್ಲೂ ಪ್ರಚಾರದ ತೆವಲು ಹೊಂದಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಜೆ.ಆರ್.ಲೋಬೊ ಆಪಾದಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಮ ಕಾಲದಲ್ಲಿ ರೋಗ ಪೀಡಿತರಿಗೆ ಸಕಾಲಿಕವಾಗಿ ಎಲ್ಲಾ ವಿಧದ ತುರ್ತು ವೈದ್ಯಕೀಯ ನೆರವು ಒದಗಿಸಿಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕೋವಿಡ್ ವಾರಿಯರ್ಸ್‌ನವರು ದಿನದ 24 ಗಂಟೆಯೂ ಸಿದ್ಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಮಾಯಕ ರೋಗಿಗಳ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಅಂದಿನ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್, ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಮತ್ತು ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಿದ್ದರೂ ಕೂಡ ಶಾಸಕ ಕಾಮತ್ ವೆನ್ಲಾಕ್ ಆಸ್ಪತ್ರೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ ಎಂದಿರುವುದು ಅವರ ಅಜ್ಞಾನದ ಪರಮಾವಧಿಯಾಗಿದೆ ಎಂದರು.
ಜಿಲ್ಲೆಯಲ್ಲಿ 3.65 ಲಕ್ಷ ಮಂದಿಗೆ ಈಗಾಗಲೇ ಮೊದಲ ಹಂತದ ಕೋವಿಡ್ ಲಸಿಕೆ ನೀಡಲಾಗಿದೆ. ಬಳಿಕ 60 ದಿನಗಳ ಒಳಗೆ 2ನೇ ಹಂತದ ಲಸಿಕೆ ನೀಡಬೇಕಿದೆ. ಆದರೆ ಇದೀಗ ಬಂದಿರುವ ಲಸಿಕೆಯನ್ನು ಆದ್ಯತೆ ಮೇರಗೆ ನೀಡದೆ ಬಿಜೆಪಿ ಕಚೇರಿಯಿಂದ ಕರೆ ಮಾಡಿ ತಮಗೆ ಬೇಕಾಗಿದ್ದವರಿಗೆ ನೀಡಲಾಗುತ್ತಿದೆ. ವೇದವ್ಯಾಸ ಕಾಮತರು ರೋಗಿಗಳ ಅನುಪಾತಕ್ಕೆ ಅನುಗುಣವಾಗಿ ಸರಕಾರದೊಂದಿಗೆ ಮಾತುಕತೆ ನಡೆಸಿ ಇನ್ನಷ್ಟು ಲಸಿಕೆ ತರಿಸಿಕೊಳ್ಳುವ ಬದಲು ಲಭ್ಯವಿರುವ ಲಸಿಕೆಯನ್ನು ತನಗೆ ಬೇಕಿದ್ದವರಿಗೆ ಕೊಡಿಸುವಂತೆ ಶಿಫಾರಸ್ಸು ಮಾಡುತ್ತಿರುವುದು ನಾಚಿಕೆಯ ಸಂಗತಿ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವೆನ್ಲಾಕ್ ಆಸ್ಪತ್ರೆಯ ಹಳೆ ಕಟ್ಟಡದ ನವೀಕರಣದಿಂದ ಹಿಡಿದು ಸುಸಜ್ಜಿತ ಬ್ಲಡ್ ಬ್ಯಾಂಕ್, ಕೋವಿಡ್ ಬಿಲ್ಡಿಂಗ್ ಆಯುಷ್ ಬಿಲ್ಡಿಂಗ್ ಎಲ್ಲವೂ ಆಗಿತ್ತು. ಆದರೆ ಹಾಲಿ ಶಾಸಕರು ಆಸ್ಪತ್ರೆ ಅಭಿವೃದ್ಧಿ ಸಮಿತಿಯನ್ನು ರಚಿಸಿಲ್ಲ. ತಾನು ಮಾಡದ ಕೆಲಸಕ್ಕೂ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಇನ್ನಾದರೂ ತನ್ನನ್ನು ಪ್ರಾಮಾಣಿಕವಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚಿಂತಿಸಲಿ. ಅದು ಬಿಟ್ಟು ಬಾಲಿಷ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಜೆ,ಆರ್,ಲೋಬೋ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್, ಕಾರ್ಪೊರೇಟರ್‌ಗಳಾದ ಅಶ್ರಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ಪಕ್ಷದ ಪದಾಧಿಕಾರಿಗಳಾದ ಪ್ರಕಾಶ್ ಸಾಲ್ಯಾನ್, ಸಂತೋಷ್ ಶೆಟ್ಟಿ, ವಿಶ್ವಾಸ್‌ಕುಮಾರ್ ದಾಸ್, ಟಿ.ಕೆ.ಸುಧೀರ್, ಮುಹಮ್ಮದ್ ಕುಂಜತ್ತಬೈಲ್, ನೀರಜ್‌ಪಾಲ್, ಆರೀಫ್ ಬಾವಾ, ರಮಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.