ಕೊರೋನ-ಲಾಕ್‌ಡೌನ್ ಹಿನ್ನೆಲೆ: ಮುಟ್ಟುಗೋಲು ಹಾಕಲ್ಪಟ್ಟ ವಾಹನ ಬಿಡಿಸುವುದು ಸದ್ಯ ಸುಲಭವಲ್ಲ !
ಮಂಗಳೂರು, ಮೇ 11: ಕೊರೋನ-ಲಾಕ್‌ಡೌನ್-ಕರ್ಫ್ಯೂ ಅವಧಿಯಲ್ಲಿ ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಬಿಡಿಸಲು ಸದ್ಯ ಸುಲಭವಿಲ್ಲ. ಅಂದರೆ ಪೊಲೀಸರು ವಶಪಡಿಸಿಕೊಂಡ ಈ ವಾಹನವನ್ನು ಬಿಡಿಸಲು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಸದ್ಯ ನ್ಯಾಯಾಲಯ ತೆರೆದಿದ್ದರೂ ಕೂಡ ಕೋವಿಡ್-19 ಹಿನ್ನೆಲೆಯಲ್ಲಿ ಕಲಾಪಗಳು ನಡೆಯುತ್ತಿಲ್ಲ. ಹಾಗಾಗಿ ಪೊಲೀಸರು ಅನಗತ್ಯವಾಗಿ ತಿರುಗಾಡಿದ ವಾಹನಗಳನ್ನು ವಶಪಡಿಸಿಕೊಂಡರೆ ಅವುಗಳನ್ನು ಬಿಡಿಸಲು ಕನಿಷ್ಟ ಒಂದೆರೆಡು ತಿಂಗಳು ಕಾಯಬೇಕಾಗುತ್ತದೆ.
ಕೊರೋನ-ಕರ್ಫ್ಯೂ ವೇಳೆ ಮಾರ್ಗಸೂಚಿ ಉಲ್ಲಂಘಿಸಿ ವಾಹನ ಚಲಾಯಿಸಿದರೆ ಏನೂ ಆಗುವುದಿಲ್ಲ ಎಂದು ಭಾವಿಸುವವರಿಗೆ ಪೊಲೀಸರ ಈ ಬಿಗು ನಿಲುವು ವಾಹನಿಗರಿಗೆ ಸಮಸ್ಯೆಯಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ.
ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಮತ್ತು ದ.ಕ. ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಸಹಿತ ಸುಮಾರು 2,500ಕ್ಕೂ ಅಧಿಕ ವಾಹನಗಳನ್ನು ಪೊಲೀಸ್ ಇಲಾಖೆ ಮುಟ್ಟುಗೋಲು ಹಾಕಿವೆ. ಆ ಪೈಕಿ ಕೆಲವು ವಾಹನಗಳನ್ನು ಪ್ರತ್ಯೇಕ ನಿಯಮದಡಿ ದಂಡ ಕಟ್ಟಿ ಬಿಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಕೆಲವು ವಿನಾ ಕಾರಣ ಸುತ್ತಾಡುತ್ತಿದ್ದು, ಆ ವಾಹನಗಳ ಮೇಲೆ ಎಂಡಿಎಂಎ ಕಾಯ್ದೆಯಡಿ ಎಪಿಡೆಮಿಕ್ ಕೇಸು ಹಾಕಲಾಗಿದೆ. ಕೊರೋನ ಕರ್ಫ್ಯೂ ನಿರ್ಬಂಧ ಉಲ್ಲಂಸಿದ ಕಾರಣ ಈ ವಾಹನವನ್ನು ನ್ಯಾಯಾಲಯಗಳಲ್ಲೇ ದಾಖಲೆಗಳನ್ನು ಹಾಜರುಪಡಿಸಿ ಬಿಡಿಸಬೇಕಾಗುತ್ತದೆ.
ಆದರೆ ಈಗ ಕೋವಿಡ್-19 ಹಿನ್ನೆಲೆಯಲ್ಲಿ ನ್ಯಾಯಾಲದ ತೆರೆದಿದ್ದರೂ ಕಲಾಪಗಳು ನಡೆಯುತ್ತಿಲ್ಲ. ಹಾಗಾಗಿ ಮುಟ್ಟುಗೋಲು ಆದ ವಾಹನ ಗಳನ್ನು ಠಾಣೆಯ ಆವರಣದಲ್ಲೇ ಇಡಬೇಕಾಗುತ್ತದೆ. ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಟ್ಟುಗೋಲು ಹಾಕಲಾದ ವಾಹನಗಳನ್ನಿಡಲು ಸ್ಥಳಾವಕಾಶದ ಕೊರತೆಯೂ ಇದೆ.
ವಶಕ್ಕೆ ಪಡೆದ ವಾಹನಗಳು ಕಳವು ಆಗದಂತೆ ಅಥವಾ ಅವುಗಳಿಗೆ ಹಾನಿಯಾಗದಂತೆ ಸಂರಕ್ಷಿಸಿಡುವ ಜವಾಬ್ದಾರಿ ಕೂಡ ಪೊಲೀಸ್ ಇಲಾಖೆಯ ಮೇಲಿದೆ. ಒಂದು ವೇಳೆ ವಾಹನಗಳಿಗೆ ಹಾನಿ ಉಂಟಾದರೆ ಪೊಲೀಸರೇ ಅದರ ವೆಚ್ಚವನ್ನು ಭರಿಸಬೇಕಾಗುತ್ತದೆ. ಹಾಗಾಗಿ ವಾಹನಗಳನ್ನು ಸಂರಕ್ಷಿಸಿಡುವ ಜವಾಬ್ದಾರಿಯನ್ನು ಪ್ರತಿಯೊಂದು ಠಾಣೆಯಲ್ಲಿ ಒಂದಿಬ್ಬರು ಪೊಲೀಸ್ ಸಿಬ್ಬಂದಿಗೆ ವಹಿಸಿ ಕೊಡಲಾಗಿದೆ.
ಆದಾಗ್ಯೂ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವ ವಾಹನಗಳ ಮೇಲೆ ಕಣ್ಣಿಡಲು ಪೊಲೀಸರು ಹಿಂದೇಟು ಹಾಕುತ್ತಿಲ್ಲ. ದಿನದಿಂದ ದಿನಕ್ಕೆ ಮುಟ್ಟು ಗೋಲು ಹಾಕಲಾಗುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ.
ಮುಟ್ಟುಗೋಲು ಹಾಕಿದ ವಾಹನಗಳಲ್ಲಿ ಪ್ರಕರಣದ ಗಂಭೀರತೆ ಅರಿತು ಕೆಲವು ವಾಹನಗಳಿಗೆ ಮಾತ್ರ ಎಪಿಡೆಮಿಕ್ ಕೇಸು ಹಾಕಲಾಗಿದೆ. ಇದೀಗ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿದರೆ ಕಠಿಣ ಕ್ರಮ ಜರುಗಿಸ ಲಾಗುವುದು ಎಂದು ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಟರಾಜ್ ತಿಳಿಸಿದ್ದಾರೆ.