ಅರಬಿ ಸಮುದ್ರದಲ್ಲಿ ಚಂಡಮಾರುತ ಸಾಧ್ಯತೆ: ಹವಾಮಾನ ಕೇಂದ್ರ ಮುನ್ಸೂಚನೆ

Update: 2021-05-11 16:46 GMT
ಸಾಂದರ್ಭಿಕ ಚಿತ್ರ

ಉಡುಪಿ, ಮೇ 11: ಮೇ 14ರ ಮುಂಜಾನೆ ಸುಮಾರಿಗೆ ನೈರುತ್ಯ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಪ್ರದೇಶ ಸೃಷ್ಟಿಯಾಗಲಿದ್ದು, ಅದು ಅರಬಿ ಸಮುದ್ರದಲ್ಲಿ ಉತ್ತರ, ಉತ್ತರ-ಪಶ್ಚಿಮ ದಿಕ್ಕಿನೆಡೆಗೆ ಅಂದರೆ ಲಕ್ಷದ್ವೀಪದತ್ತ ಚಲಿಸುವ ಸಾಧ್ಯತೆ ಇದ್ದು, ಅಲ್ಲಿ ಪ್ರಬಲಗೊಳ್ಳುತ್ತಾ ಸಾಗಲಿದೆ.
ಮುಂದೆ ಅದು ಚಂಡಮಾರುತವಾಗಿ ಬದಲಾಗಿ ಮೇ 16ರ ಸುಮಾರಿಗೆ ಪೂರ್ವ ಮಧ್ಯ ಅರಬಿಸಮುದ್ರದಲ್ಲಿ ಉತ್ತರ, ಉತ್ತರ-ಪಶ್ಚಿಮ ದಿಕ್ಕಿನತ್ತ ಚಲಿಸಲಿದೆ. ಇದರಿಂದ ಮೇ 12ರಿಂದ 15ರವರೆಗೆ ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ರಾಜ್ಯದ ಪಶ್ಚಿಮ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮೇ 12ರಿಂದ 14ರವರೆಗೆ ಸಾಧಾರಣದಿಂದ ಭಾರೀ ಮಳೆಯಾದರೆ, ಉತ್ತರ ಮತ್ತು ಪಶ್ಚಿಮ ಒಳನಾಡು ಕರ್ನಾಟಕ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಮೇ 15ರಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿ ಗುಡುಗು-ಮಿಂಚಿನಿಂದ ಕೂಡಿದ ಬಿರುಗಾಳಿಯೂ ಬೀಸುವ ಸಾಧ್ಯತೆಯೂ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News