ಕಾಪು : ಕೋವಿಡ್ ನಿಯಂತ್ರಣಾ ಸಭೆ

Update: 2021-05-11 16:58 GMT

ಕಾಪು: ಹೋಂ ಕ್ವಾರಂಟೈನ್ ಮತ್ತು ಐಸೋಲೇಶನ್ ನಲ್ಲಿರುವ ವ್ಯಕ್ತಿಗಳ ಖಚಿತ ಮಾಹಿತಿಯನ್ನು ಸಂಗ್ರಹಿಸಿ ರೋಗ ಲಕ್ಷಣ ಕಂಡು ಬಂದ ವ್ಯಕ್ತಿಗಳನ್ನು ತುರ್ತು ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಮಾಡಬೇಕು ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.

ಅವರು ಮಂಗಳವಾರ ಕಾಪು ಪುರಸಭಾ ಸಭಾಂಗಣದಲ್ಲಿ ಕಾಪು ತಾಲೂಕು ಮಟ್ಟದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್-19 ಎರಡನೇ ಅಲೆ ಹೆಚ್ಚುತ್ತಿರುವುದರಿಂದ ಎಲ್ಲರೂ ಒಗ್ಗಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ವೈರಸ್ ವಿರುದ್ಧ ಹೋರಾಡ ಬೇಕಾಗಿದೆ. ತುರ್ತು ಕೋವಿಡ್ ಕಿಟ್ ಅಗತ್ಯವಿದ್ದಲ್ಲಿ ಶಾಸಕರ ನಿಧಿಯಿಂದ ಖರೀದಿಸಲು ಅವಕಾಶವಿದೆ ಎಂದರು.

ಗ್ರಾಮದಲ್ಲಿ ಕೋವಿಡ್ ಸಂಬಂಧಿಸಿದ ಮರಣ ಸಂಭವಿಸಿದಲ್ಲಿ ಕೂಡಲೇ ವರದಿ ನೀಡಬೇಕೆಂದು ತಿಳಿಸಿದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶೀಥಿಲೀಕರಣ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಾಪು ತಹಶೀಲ್ದಾರರಾದ ಪ್ರತಿಭಾ ಆರ್ ಮಾತನಾಡಿ, ಹೋಂ ಕ್ವಾರೆಂಟೈನ್  ಮತ್ತು ಹೊಂ ಐಸೊಲೇಷನ್‍ನಲ್ಲಿರುವ ವ್ಯಕ್ತಿಗಳ ಮನೆಗೆ ಪ್ರತಿ ದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಕರಣಿಕರು ಭೇಟಿ ನೀಡಿ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ ಆಸ್ಪತ್ರೆಗೆ ದಾಖಲಿಸಬೇಕಾದ ಪ್ರಕರಣಗಳಿದ್ದಲ್ಲಿ ಕೂಡಲೇ ಮಾಹಿತಿಯನ್ನು ಸಂಬಂಧಪಟ್ಟ ನೋಡಲ್ ಅಧಿಕಾರಿ, ತಹಶಿಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಬೇಕು. 

ಪ್ರತಿದಿನ 9 ಗಂಟೆಯೊಳಗಾಗಿ ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೋಲೇಶನ್ ನಲ್ಲಿರುವ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಫೋಟೊ ತೆಗೆದು ಆಪ್‍ನಲ್ಲಿ ಅಪ್ ಲೋಡ್ ಮಾಡುವುದು ಮತ್ತು ರೋಗಿಗೆ ಪ್ರತ್ಯೇಕ ಶೌಚಾಲಯ, ಕೊಠಡಿ ವ್ಯವಸ್ಥೆಯ ಬಗ್ಗೆ ಖಾತ್ರಿಪಡಿಸಿಕೊಂಡು ವರದಿ ನೀಡಬೇಕಾಗಿ ತಹಶೀಲ್ದಾರರು ತಿಳಿಸಿದರು.

ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುಂದರ್ ನಾಯಕ್, ಕಾಪು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ ಸುಬ್ರಾಯ ಕಾಮತ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ, ಉಪತಹಶಿಲ್ದಾರ್ ಅಶೋಕ್ ಎನ್ ಕೋಟೆಕಾರ್, ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಕಂದಾಯ ನಿರೀಕ್ಷಕರು ಹಾಗೂ ಎಲ್ಲಾ ಗ್ರಾಮಕರಣಿಕರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News