ಜನರು ತಮ್ಮ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ಮಾಡಿಸಿ : ಸಚಿವ ಶಿವರಾಮ ಹೆಬ್ಬಾರ

Update: 2021-05-11 17:05 GMT

ಭಟ್ಕಳ : ದಿನದಿಂದ ದಿನಕ್ಕೆ ಕೋವಿಡ್ 2ನೇ ಅಲೆ ಹೆಚ್ಚುತ್ತಿರುವುದರಿಂದ ಜನರು ತಮ್ಮ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಆ ನಿಟ್ಟಿನಲ್ಲಿ ಜನರ ಮನವೊಲಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ  ಪ್ರಮುಖ ಅಧಿಕಾರಿಗಳು, ಸರಕಾರಿ ಮತ್ತು  ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಕೋವಿಡ್ ನಿಯಂತ್ರಣದ ಕುರಿತು ಚರ್ಚೆ ನಡೆಸಿದ ಅವರು, ಕೋವಿಡ್ ಸೇರಿದಂತೆ ಯಾವುದೇ ಕಾಯಿಲೆಗೆ ಯಾವುದೇ ಜಾತಿ ಧರ್ಮ ಮತ ಎಂಬ ಭೇದಭಾವವಿಲ್ಲ. ಎಷ್ಟೊತ್ತಿಗೆ ಯಾವಾಗ ಬೇಕಾದರೂ ಬರಬಹುದು. ಕಾಯಿಲೆ ಉಲ್ಬಣವಾದ ನಂತರ ಆಸ್ಪತ್ರೆಗೆ ಬಂದರೆ ಕೊನೆ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕಾಯಿಲೆ ಬರುವ ಮೊದಲೇ ಜಾಗೃತಿ ವಹಿಸಬೇಕು. ಪರೀಕ್ಷೆ ಮಾಡಿಸಬೇಕಿದೆ. ಖಾಸಗಿ ಆಸ್ಪತ್ರೆಯವರು ತಮ್ಮ ಬಳಿ ಬರುವ ರೋಗಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಮನವೊಲಿಸುವ ಕೆಲಸ ಮಾಡಬೇಕು. ಕೋವಿಡ್ ನಿರ್ಮೂಲನೆಯಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಆಗಬೇಕೆಂದರು. ಸಭೆಯಲ್ಲಿದ್ದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಜನರು ಹಿಂಜರಿಯುತ್ತಿದ್ದಾರೆ. ಟೆಸ್ಟ್ ಮಾಡಿದರೆ ಆಸ್ಪತ್ರೆಯಲ್ಲಿ ಎಡ್ಮಿಟ್ ಮಾಡುತ್ತಾರೆಂಬ ಭಯವಿದೆ. ಜನತೆಗೆ ಕೋವಿಡ್ ಟೆಸ್ಟಿನ ಕುರಿತು ಇನ್ನೂ  ಸರಿಯಾದ ತಿಳುವಳಿಕೆ ಬಂದಿಲ್ಲ. ಟೆಸ್ಟ್ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಎಲ್ಲಾ ಕಡೆ ಆಗಬೇಕೆಂದರು.

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಹೆಚ್ಚಿನ ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊನೆಗಳಿಗೆಯಲ್ಲಿ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ನಮ್ಮಲ್ಲಿ ಬಂದವರಿಗೆ ನಾವು ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೆಲವರು ಬರುವಾಗಲೇ ಗಂಭೀರ ಸ್ಥಿತಿಯಲ್ಲಿರುತ್ತಿದ್ದು ಆಗ ನಮ್ಮಿಂದ ಏನೂ ಮಾಡಲಾಗುತ್ತಿಲ್ಲ ಎಂದರು.

ಶಾಸಕ ಸುನೀಲ ನಾಯ್ಕ ತಾಲ್ಲೂಕಿನ ಕೆಲವು ಕ್ಲಿನಿಕ್‍ನಲ್ಲಿ ದಿನಿಂದ ದಿನಕ್ಕೆ ಜನರ ಸರದಿ ಸಾಲು ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಕ್ಷಣ ಇರುವವರಿಗೆ ಖಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಸೂಚಿಸಬೇಕೆಂದರು.

ತಂಝೀಂ ಮುಖಂಡ ಇನಾಯತುಲ್ಲಾ ಶಾಬಂದ್ರಿಯವರು ಭಟ್ಕಳದಲ್ಲಿ ಸರಕಾರಿ ಆಸ್ಪತ್ರೆ ವ್ಯವಸ್ಥೆ ಉತ್ತಮವಾಗಿದ್ದು, ಹೊರ ತಾಲ್ಲೂಕಿನಿಂದಲೂ ರೋಗಿಗಳು ಬರುತ್ತಿದ್ದಾರೆ. ಕೋವಿಡ್ ನಿಯಂತ್ರಣವನ್ನು ತಾಲ್ಲೂಕು ಆಡಳಿತ ಉತ್ತಮವಾಗಿಯೇ ನಿಭಾಯಿಸುತ್ತಿದೆ.  ಆದರೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಡ್, ಆಕ್ಷಿಜನ್ ಸೇರಿದಂತೆ ಸೌಲಭ್ಯ ಹೆಚ್ಚಿಸಬೇಕಿದೆ. ಸರಕಾರದಿಂದ ಹೆಚ್ಚಿನ ಸವಲತ್ತು ಭಟ್ಕಳ ಮತ್ತು ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ಸಿಗುವಂತೆ ಮಾಡಬೇಕೆಂದು ಸಚಿವರಲ್ಲಿ ಆಗ್ರಹಿಸಿದರು. ಸಹಾಯಕ ಆಯುಕ್ತೆ ಮಮತಾದೇವಿ ಕೋವಿಡ್ ಸ್ಥಿತಿಗತಿಯ ಮಾಹಿತಿ ನೀಡಿದರು.

ಸಭೆಯಲ್ಲಿ  ಡಿವೈಎಸ್ಪಿ ಕೆ ಯು ಬೆಳ್ಳಿಯಪ್ಪ, ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಪ್ರತಿನಿಧಿ ಶಿವಾನಿಶಾಂತರಾಮ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ತಹಶೀಲ್ದಾರ್ ರವಿಚಂದ್ರ ಎಸ್, ಸಿಪಿಐ ದಿವಾಕರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತ, ತಾ.ಪಂ. ಇಓ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ದೇವರಾಜ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News