ಹೊಸ ದಾಖಲೆಯ ಗರಿಷ್ಟ ಮಟ್ಟ ತಲುಪಿದ ಇಂಧನ ಬೆಲೆ

Update: 2021-05-12 06:17 GMT
photo: national herald

ಹೊಸದಿಲ್ಲಿ: ಪೆಟ್ರೋಲ್  ಹಾಗೂ  ಡೀಸೆಲ್ ಬೆಲೆ ಈ ವಾರ ಸತತ ಮೂರನೇ ದಿನ ಏರಿಸಲಾಗಿದ್ದು, ಬುಧವಾರ ದೇಶಾದ್ಯಂತ ಇಂಧನದ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ, ಪೆಟ್ರೋಲ್ ಬೆಲೆ 25 ಪೈಸೆ ಏರಿಕೆಯಾಗಿದೆ.  ಡೀಸೆಲ್ ಬೆಲೆ ಕೂಡ  25 ಪೈಸೆಗಳಷ್ಟು ಹೆಚ್ಚಾಗಿದೆ.

ಈ ತಿಂಗಳು ಇಂಧನ ಬೆಲೆಯಲ್ಲಿ ಏಳನೇ ಬಾರಿ ಹೆಚ್ಚಳವಾಗಿದೆ. ಕಳೆದ ವಾರ ಸತತ ನಾಲ್ಕು ದಿನಗಳವರೆಗೆ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಇದರ ನಂತರ, ವಾರಾಂತ್ಯದಲ್ಲಿ (ಶನಿವಾರ-ರವಿವಾರ) ಚಿಲ್ಲರೆ ದರಗಳು ಸ್ಥಿರವಾಗಿದ್ದವು ಸೋಮವಾರದಿಂದ ಮತ್ತೆ ದರ ಏರಿಸಲಾಗುತ್ತಿದೆ.

ಈ ತಿಂಗಳು ಇಲ್ಲಿಯವರೆಗೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 1.65 ರೂ ಹಾಗೂ  ಡೀಸೆಲ್ ಬೆಲೆ ಹೊಸದಿಲ್ಲಿಯಲ್ಲಿ 1.88 ರೂ.ಗೆ ಏರಿದೆ.

ಇತ್ತೀಚಿನ ಬೆಲೆ ಪರಿಷ್ಕರಣೆಯ ನಂತರ, ದಿಲ್ಲಿಯಲ್ಲಿ ಪೆಟ್ರೋಲ್ ಈಗ ಲೀಟರ್ ಗೆ 92.05 ರೂ. ಮಾರಾಟವಾಗಿದ್ದರೆ, ಡೀಸೆಲ್ 82.61 ರೂ.ಗೆ ಮಾರಾಟವಾಗುತ್ತಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ, ಪೆಟ್ರೋಲ್ ಬೆಲೆ ಈಗ 98.36 ರೂ., ಡೀಸೆಲ್ ಬೆಲೆ 89.75 ರೂ. ಇದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡೇಟಾ ತೋರಿಸಿದೆ.

ಇತರ ಪ್ರಮುಖ ನಗರಗಳ ರಾಜಧಾನಿಯಲ್ಲಿ ಪೆಟ್ರೋಲ್ 100 ರೂ.ಗಳನ್ನು ದಾಟಿದೆ.  ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ  ಬುಧವಾರ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100.08 ರೂ. ಡೀಸೆಲ್ ಬೆಲೆ 90.95 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News