ಸಾಮಾಜಿಕ ಹೋರಾಟಗಾರ ಗೌತಮ್ ನವಲಖಾ ಅವರ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Update: 2021-09-02 09:49 GMT

 ಹೊಸದಿಲ್ಲಿ,ಎ.25: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.
     
ಕಳೆದ ವರ್ಷದ ಎಪ್ರಿಲ್ 14ರಂದು ನ್ಯಾಯಾಲಯಕ್ಕೆ ಶರಣಾದ ಬಳಿಕ ನವ್ಲಾಖಾ ಅವರನ್ನು ಜೈಲಿನಲ್ಲಿರಿಸಲಾಗಿದೆ. ಆದರೆ ಭೀಮಾಕೋರೆಗಾಂವ್ ಹಿಂಸಾಚಾರದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ನಿಗದಿತ 90 ದಿನಗಳ ಅವಧಿಯಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ವಿಫಲವಾಗಿದ್ದರಿಂದ ತನಗೆ ಸ್ಥಿರಸ್ಥಿತಿಯ(ಡಿಫಾಲ್ಟ್) ಜಾಮೀನು ಬಿಡುಗಡೆ ನೀಡಬೇಕೆಂದು ಕೋರಿ ನವ್ಲಾಖಾ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
 
 ಆದರೆ ವಿಚಾರಣಾ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ನವ್ಲಾಖಾ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ ಅವರ ಅರ್ಜಿಯನ್ನು ತಳ್ಳಿಹಾಕಿದ ಬಾಂಬೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಯಾವುದೇ ಕಾರಣವಿಲ್ಲವೆಂದು ಸ್ಪಷ್ಟಪಡಿಸಿತ್ತು. ಆನಂತರ ನವ್ಲಾಖಾ ಅವರು ಸುಪ್ರೀಂಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. 

2018ರ ಆಗಸ್ಟ್ 29 ಹಾಗೂ ಅಕ್ಟೋಬರ್ 1ರ ಮಧ್ಯೆ ನವ್ಲಾಖಾ ಅವರನ್ನು ಗೃಹಬಂಧನದಲ್ಲಿರಿಸಿರುವುದನ್ನು ಅಕ್ರಮವೆಂಬುದಾಗಿ ದಿಲ್ಲಿ ಹೈಕೋರ್ಟ್ ಅಭಿಪ್ರಾಯಿಸಿರುವುದರಿಂದ, ಗೃಹಬಂಧನದ ಕಾಲಾವಧಿಯನ್ನು ನವ್ಲಾಖಾ ಅವರ ಬಂಧನದ ಕಾಲಾವಧಿಯಲ್ಲಿ ಸೇರ್ಪಡೆಗೊಳಿಸಲು ಸಾಧ್ಯವಿಲ್ಲವೆಂದು ಎನ್ಐಎ ಪರ ವಕೀಲರು ಸುಪ್ರೀಂಕೋರ್ಟ್ ಮುಂದೆ ವಾದಿಸಿದ್ದರು. ಆದರೆ ತನ್ನ 34 ದಿನಗಳ ಬಂಧನದ ಅವಧಿಯಲ್ಲಿ ದೋಷಾರೋಪಪಟ್ಟಿ ಸಲ್ಲಿಕೆಯಾದ ಕಾಲಾವಧಿಯನ್ನು ಕೂಡಾ ಸೇರ್ಪಡೆಗೊಳಿಸಬೇಕೆಂದು ನವ್ಲಾಖಾ ಕೋರಿದ್ದರು.
  
2018ರಲ್ಲಿ ನಡೆದ ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೌತಮ್ ನವ್ಲಾಖಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ದೋಷಾರೋಪ ದಾಖಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News