×
Ad

ಆಡಳಿತ ವೈಫಲ್ಯದ ಎಚ್ಟರಿಕೆಯನ್ನು ರಾಜಕೀಯ ಎನ್ನಬೇಡಿ: ಎ.ಸಿ.ವಿನಯರಾಜ್

Update: 2021-05-12 13:58 IST

ಮಂಗಳೂರು, ಮೇ 12: ಆಡಳಿತದ ವೈಫಲ್ಯವನ್ನು ಎತ್ತಿಹಿಡಿದು ಆಡಳಿತ ಯಂತ್ರವನ್ನು ಸುಸೂತ್ರವಾಗಿಸುವುದು ವಿಪಕ್ಷದ್ದಾಗಿದ್ದು, ಅದನ್ನು ನಾವು ಮಾಡುತ್ತಿದ್ದೇವೆ. ಅದನ್ನು ರಾಜಕೀಯ ಎನ್ನುವವರು ಜನಪ್ರತಿನಿಧಿಗಳಾಗಿ ಮುಂದುವರಿಯಲು ಅರ್ಹರಲ್ಲ ಎಂದು ಕೆಪಿಸಿಸಿ ಮಾಧ್ಯಮ ಸಂವಹನಕಾರ ಎಸಿ ವಿನಯರಾಜ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ, ಲಸಿಕೆ ಕೊರತೆ ಬಗ್ಗೆ ಗಮನಹರಿಸಿ ಜಿಲ್ಲೆಯಲ್ಲಿ ಪ್ರಾಣಹಾನಿ ಆಗದಂತೆ ಇಲ್ಲಿನ ಶಾಸಕರು ಹಾಗೂ ಸಂಸದರು ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಕೇವಲ ಎ.ಸಿ. ರೂಂನಲ್ಲಿ ಕುಳಿತು ಸಭೆಗಳನ್ನು ಮಾಡುವುದು, ವಿದೇಶಗಳಿಂದ ಆಕ್ಸಿಜನ್ ಹೊತ್ತು ತರುವ ಹಡಗುಗಳ ಎದುರು ಫೋಸ್ ನೀಡಲು ಜನ ಜನಪ್ರತಿನಿಧಿಗಳನ್ನು ಆರಿಸಿಲ್ಲ ಎಂದು ಟೀಕಿಸಿದ ಅವರು, ಕೊರೋನ ಎರಡನೇ ಅಲೆಯಿಂದ ಈಗಾಗಲೇ ಜನತೆ ತತ್ತರಿಸಿದ್ದು, ಅಕ್ಟೋಬರ್‌ನಲ್ಲಿ ಜನತೆಯನ್ನು ಕಂಗೆಡಿಸಲಿರುವ ಮೂರನೇ ಅಲೆಯನ್ನು ನಿಯಂತ್ರಿಸಲು ದ.ಕ. ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.

ಕೊರೋನ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಎರಡನೇ ಅಲೆಯ ಬಗ್ಗೆ ಮುನ್ಸೂಚನೆ ಇದ್ದರೂ ಪೂರ್ವ ತಯಾರಿ ಮಾಡಲು ವಿಫಲವಾದ ಕಾರಣ ಅಪಾರ ಸಾವು ನೋವುಗಳಿಗೆ ಕಾರಣವಾಗಿದೆ. ಕೋವಿಡ್ ನಿಂದ ಮರಣಪಟ್ಟವರ ಸಂಖ್ಯೆ ಕಡಿಮೆ ಮಾಡಲು ಸರಕಾರ ಎರಡು ವಿಧವಾಗಿ ವಿಂಗಡಣೆ ಮಾಡಿ ಜನರಿಂದ ಸತ್ಯಂಶ ಮುಚ್ಚಿಟ್ಟಿದೆ. ಇದೊಂದು ಕೊಲೆಗಡುಕ ಸರಕಾರವೇ ಎಂಬ ಸಂಶಯ ಮೂಡಿದೆ ಎಂದವರು ಟೀಕಿಸಿದರು.

ಕೊರೋನ ಸ್ವಾಬ್ ಪರೀಕ್ಷೆ ವರದಿ ಬರಲು ಸುಮಾರು 3-4 ದಿನ ತಗಲುತ್ತಿದ್ದು ಇದು ಕೂಡ ಸೋಂಕು ಹರಡಲು ಒಂದು ಕಾರಣವಾಗಿದೆ. 24 ಗಂಟೆಯ ಒಳಗಾಗಿ ವರದಿ ಸಿಗುವಂತೆ ಇಲ್ಲಿಯ ಶಾಸಕ ವೇದವ್ಯಾಸ ಕಾಮತ್ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಕೊರೋನ ಒಂದನೇ ಅಲೆಯ ಸಂದರ್ಭ ಜಿಲ್ಲೆಗೆ ಬಂದ ವೆಂಟಿಲೇಟರ್ ಗಳ ಪೈಕಿ ಸುಮಾರು 17 ವೆಂಟಿಲೇಟರ್ ಗಳು ಜಿಲ್ಲೆಯ ವಿವಿಧ ತಾಲೂಕು ಕೇಂದ್ರ ಆಸ್ಪೆತ್ರೆಗಳಿಗೆ ಕೊಟ್ಟಿದ್ದು ಅದನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ತಂದು ಇಲ್ಲಿ ಅಳವಡಿಸಿ ಜನರ ಜೀವ ಉಳಿಸುವ ಬಗ್ಗೆ ಇಲ್ಲಿಯ ಸಂಸದರು ಅಥವಾ ಶಾಸಕರು ಯಾಕೆ ಪ್ರಯತ್ನ ಮಾಡಿಲ್ಲ ಎಂದು ವಿನಯರಾಜ್ ಪ್ರಶ್ನಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2,77,123 ಮಂದಿಗೆ ಒಂದನೇ ಡೋಸ್ ಕೋವಿಡ್ ತಡೆ ಲಸಿಕೆ ನೀಡಲಾಗಿದೆ. ಅದರಲ್ಲಿ ಜಿಲ್ಲೆಯ ಆಸ್ಪತ್ರೆಗಳ ವಿವಿಧ ವಿಭಾಗಗಳ ಸಿಬ್ಬಂದಿ, ವೈದ್ಯರು, ಫ್ರಂಟ್ ಲೈನ್ ವಾರಿಯರ್ಸ್ ಮತ್ತು ನಾಗರಿಕರು ಸೇರಿದ್ದಾರೆ. ಅದರಲ್ಲಿ ಎರಡನೇ ಡೋಸ್ ತೆಗೆದುಕೊಂಡವರು ಕೇವಲ 89,167. ಈಗ 18ರಿಂದ 44 ವಯಸ್ಸಿನ ಒಳಪಟ್ಟವರಿಗೆ ಲಸಿಕೆ ಕೊಡಲು ಆರಂಭಿಸಿದ್ದಾರೆ. ಲಸಿಕೆ ಪಡೆದುಕೊಳ್ಳುವ ಬಗ್ಗೆ ಜನ ಇವತ್ತು ಗೊಂದಲದಲ್ಲಿ ಇದ್ದಾರೆ. ನಗರ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಬೇಕಾದಷ್ಟು ಲಸಿಕೆ ಪೂರೈಕೆ ಆಗುತ್ತಿಲ್ಲ. ಎಲ್ಲ 45 ವಯಸ್ಸು ಮೇಲ್ಪಟ್ಟವರು ಎರಡನೇ ಡೋಸ್ ಲಸಿಕೆಗಾಗಿ ಅರೋಗ್ಯ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. ಲಸಿಕೆ ಸರಕಾರದಿಂದ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಶಾ ಕಾರ್ಯಕರ್ತರಿಗೆ ಸಂಬಳ ಸಿಗದೇ ಎರಡು ತಿಂಗಳುಗಳು ಕಳೆದಿವೆ. ದಾದಿಯರ ಕೊರತೆ ಎದುರಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಲಿ ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಹೊನ್ನಯ್ಯ, ಅಪ್ಪಿ, ಸುನೀಲ್ ಪೂಜಾರಿ, ಪ್ರವೀಣ ಚಂದ್ರ ಆಳ್ವ, ಅನಿಲ್ ಕುಮಾರ್, ಶುಬೋದಯ, ನೀರಜ್ ಪಾಲ್, ದುರ್ಗಾ ಪ್ರಸಾದ್, ವಿಶ್ವಾಸ್ ಕುಮಾರ್ ದಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News