×
Ad

ಪೂರೈಕೆಯಾಗದ ಕೋವ್ಯಾಕ್ಸಿನ್‌: ದ.ಕ. ಜಿಲ್ಲೆಯಲ್ಲಿ ಸೆಕೆಂಡ್ ಡೋಸ್‌ಗಾಗಿ ಮುಂದುವರಿದ ಪರದಾಟ

Update: 2021-05-12 14:30 IST

ಮಂಗಳೂರು, ಮೇ 12: ಕೋವಿಡ್ ನಿಯಂತ್ರಣ ಲಸಿಕೆಗಾಗಿನ ಬೇಡಿಕೆ ಹೆಚ್ಚುತ್ತಿರುವಂತೆಯೇ ಈಗಾಗಲೇ ಪ್ರಥಮ ಡೋಸ್ ಪಡೆದು ದ್ವಿತೀಯ ಡೋಸ್‌ಗೆ ಕಾಯುತ್ತಿರುವ 45 ವರ್ಷ ಮೇಲ್ಪಟ್ಟ ವಯಸ್ಕರು ಹಾಗೂ ಹಿರಿಯ ನಾಗರಿಕರಿಂದ ಲಸಿಕೆಗಾಗಿ ಪರದಾಟ ಮುಂದುವರಿದೆ.

ಕೋವ್ಯಾಕ್ಸಿನ್ ಲಸಿಕೆ ಇನ್ನೂ ಜಿಲ್ಲೆಗೆ ಪೂರೆಕೈಯಾಗದ ಕಾರಣ ಈಗಾಗಲೇ ಪ್ರಥಮ ಡೋಸ್ ಈ ಲಸಿಕೆಯನ್ನು ಪಡೆದು ಅವಧಿ ಮುಗಿದಿರುವ ಮಂದಿ ಲಸಿಕಾ ಕೇಂದ್ರಗಳಿಗೆ ದಿನಾ ಆಗಮಿಸಿ ಅಧಿಕಾರಿ, ಸಿಬ್ಬಂದಿ ಜತೆ ವಾಗ್ವಾದ ನಡೆಸಿ ಹಿಂತಿರುಗುತ್ತಿದ್ದಾರೆ. ಈ ನಡುವೆ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ 2ನೆ ಡೋಸ್ ನೀಡಲು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಲಭ್ಯವಿದ್ದ ಲಸಿಕೆಯನ್ನು ಹಂಚಲಾಗಿತ್ತು. ಆದರೆ ಅದು ಕೂಡಾ ನಿನ್ನೆ ಸಂಜೆಯ ವೇಳೆಗೆ ಮುಗಿದ ಕಾರಣ ಇಂದು ಕೂಡಾ ಅನೇಕರು ಈ ಲಸಿಕಾ ಕೇಂದ್ರಗಳತ್ತ ಆಗಮಿಸಿ ಹಿಂದಿರುಗಿದರು. ಕೆಲವರು ತಮ್ಮ ಸ್ಥಳೀಯ ಲಸಿಕಾ ಕೇಂದ್ರಗಳಿಂದ ವೆನ್‌ಲಾಕ್‌ಗೆ ಆಗಮಿಸಿ ವಿಚಾರಿಸಿ ಅಧಿಕಾರಿಗಳನ್ನು ತರಾಟೆಗೈದು ತೆರಳಿದ ಘಟನೆಯೂ ನಡೆಯಿತು.

ಇನ್ನು 45 ವರ್ಷ ಮೇಲ್ಪಟ್ಟವರಿಂದ ಪ್ರಥಮ ಡೋಸ್‌ಗಾಗಿಯೂ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಲಸಿಕಾ ಕೇಂದ್ರಗಳತ್ತ ಆಗಮಿಸಿ ಹಿಂದಿರುಗುತ್ತಿದ್ದಾರೆ. ಲಸಿಕೆ ಸದ್ಯ ಲಭ್ಯವಿಲ್ಲ. ಆ್ಯಪ್ ಮೂಲಕ ಆನ್‌ಲೈನ್ ನೋಂದಣಿ ಮಾಡಿಸಿಕೊಂಡವರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು, ಸಿಬ್ಬಂದಿ ಹೇಳಿದರೆ, ನಮಗೆ ಆನ್‌ಲೈನ್ ನೋಂದಣಿ ಮಾಡಲು ಬರುವುದಿಲ್ಲ. ನೀವೇ ಮಾಡಿ, ನಮಗೆ ಲಸಿಕೆ ನೀಡಿ ಎಂಬ ಆಗ್ರಹ ಕೆಲ ಹಿರಿಯ ನಾಗರಿಕರದ್ದು.

ವೆನ್‌ಲಾಕ್ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿ ಆನ್‌ಲೈನ್ ನೋಂದಣಿ ಮಾಡಿಸಿಕೊಂಡು ದಿನಾಂಕ ಹಾಗೂ ಸಮಯ ನಿಗದಿಗೊಂಡು 18ರಿಂದ 44 ವರ್ಷದೊಳಗಿನರಿಗೆ ಲಸಿಕೆ ನೀಡುವ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ. ವೆನ್‌ಲಾಕ್‌ನಲ್ಲಿ ಮಂಗಳವಾರ 250 ಮಂದಿ ಲಸಿಕೆ ಪಡೆದಿದ್ದರೆ, ಇಂದೂ ಕೂಡಾ 250 ಮಂದಿ ಪಡೆಯುತ್ತಿದ್ದಾರೆ. 45 ವರ್ಷ ಮೇಲ್ಪಟ್ಟರಿಗೆ ಎರಡನೆ ಡೋಸ್‌ನ ಲಸಿಕೆ ಸದ್ಯ ಲಭ್ಯವಿಲ್ಲ. ಲಸಿಕೆ ಪೂರೈಕೆಯಾದ ಬಳಿಕ ತಿಳಿಸಲಾಗುವುದು ಎಂದು ಕೋವಿಡ್ ತಡೆ ಲಸಿಕೆ ಜಿಲ್ಲಾ ನೋಡಲ್ ಅಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News