ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆಯ ಕೊರತೆ, ಕರ್ತವ್ಯ ಲೋಪ: ರೋಗಿಗಳ ಸಂಬಂಧಿಕರಿಂದ ಗಂಭೀರ ಆರೋಪ

Update: 2021-05-12 11:14 GMT

ಕಾರ್ಕಳ: ಚಿಕಿತ್ಸೆ ವಿಳಂಬವಾಗಿ ಮಹಿಳೆ ಮೃತಪಟ್ಟಿದ್ದಾರೆ ಎನ್ನುವ ಆರೋಪ ಮಾಸುವ ಮುನ್ನವೇ ಇದೀಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ, ವೈದ್ಯರು, ದಾದಿಯರು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇಲ್ಲಿನ ಸಿಬ್ಬಂದಿಯೊರ್ವರ ಅತಿರೇಕದಿಂದ ವರ್ತಸಿದ್ದಾರೆಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ. ಅವರು ಮಾಧ್ಯಮದವರೊಂದಗಿಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಕಾಡಿಕಂಬ ನಿವಾಸಿ ಸುರೇಶ್‌ ಶೆಟ್ಟಿ ಎಂಬವರ ತಾಯಿ ಸುಮತಿ ಶೆಟ್ಟಿ ಅವರಿಗೆ ಕೊರೋನ ಲಕ್ಷಣ ಕಂಡುಬಂದಿದ್ದು, ಅವರನ್ನು ಮಂಗಳವಾರ ನಿಟ್ಟೆ ಸಮುದಾಯ ಆರೊಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಸುಮತಿ ಅವರ ಆರೋಗ್ಯದಲ್ಲಿ ಏರುಪೇರಾದಾಗ ಅವರನ್ನು ಬುಧವಾರ ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಂಬುಲನ್ಸ್‌ ಮೂಲಕ ಕರೆತರಲಾಯಿತು. ಬೆಳಿಗ್ಗೆ 11:30ರ ವೇಳೆ ಆಗಮಿಸಿದರೂ ಮಧ್ಯಾಹ್ನ ಒಂದು ಗಂಟೆಯಾದರೂ ವೈದ್ಯರು ಸುಮತಿ ಶೆಟ್ಟಿ ಅವರಿಗೆ ಯಾವುದೇ ಚಿಕಿತ್ಸೆ ನೀಡದೇ ಅವರನ್ನು ಹೆಂಗಸರ ವಾರ್ಡ್‌ನಲ್ಲಿ ಮಲಗಿಸಿದ್ದರು. ಒಂದು ಗಂಟೆ ಸುಮಾರಿಗೆ ಆಸ್ಪತ್ರೆಯ ಶುಶ್ರೂಷಕಿಯೊಬ್ಬರು ದಾಖಲಾತಿ ನಮೂನೆಯನ್ನು ಭರ್ತಿಗೊಳಿಸಲು ಹೇಳಿದಾಗ ಅನುಮಾನಗೊಂಡ ಸುಮತಿ ಅವರ ಪುತ್ರ ಸುರೇಶ್‌ ಶೆಟ್ಟಿ, ತನ್ನನ್ನು ಒಳಗೆ ಬಿಡುವಂತೆ ಕೇಳಿಕೊಂಡರು. ತಾಯಿಗೆ ಯಾವುದೇ ಚಿಕಿತ್ಸೆ ನೀಡದಿರುವ ಬಗ್ಗೆ ಶುಶ್ರೂಷಕಿಯೊಂದಿಗೆ ವಾಗ್ವಾದಕ್ಕಿಳಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಆಸ್ಪತ್ರೆಯ ಹೆಲ್ಪ್‌ ಡೆಸ್ಕ್‌ನ ಸದಸ್ಯರು ಸಮಸ್ಯೆ ಬಿಗಡಾಯಿಸದಂತೆ ಸಮಾಧಾನಪಡಿಸಲು ಯತ್ನಿಸಿದರು ಎಂದು ಆರೋಪಿಸಲಾಗಿದೆ. 

ಮತ್ತೊಂದು ದೂರಿನಂತೆ ಪಡುಬಿದ್ರಿ ನಾಡ್ಸಾಲು ಗ್ರಾಮದ ಮೀರಾ ಗಡಿಯಾರ್‌ ಅವರನ್ನು ಕೋವಿಡ್‌ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಾತಿ ಸಮಯದಲ್ಲಿ ಶುಶ್ರೂಷಕಿ ಸಮರ್ಪಕವಾಗಿ ಸ್ಪಂದಿಸದೇ ಹಾರಿಕೆ ಉತ್ತರ ನೀಡಿದ್ದು, ಕೂಡಲೇ ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಂಡಾಗ ತಾವೇ ಬಂದು ಇಲ್ಲಿ ಕುಳಿತುಕೊಳ್ಳುವಂತೆ ಉಡಾಫೆಯಾಗಿ ಮಾತನಾಡಿದ್ದಾರೆ. ಕಳೆದ ರಾತ್ರಿಯಿಂದ ಅವರಿಗೆ ನಿರಂತರವಾಗಿ ಬೇಧಿಯಾಗುತ್ತಿದ್ದು, ಅದಕ್ಕೆ ನಾನು ಬೇಕಾದ ಡೈಪರ್‌ ನೀಡಿದ್ದರೂ ಬೆಳಗ್ಗೆ ನಾವೇ ಮನೆಯವರು ಬಂದು ಶುಚಿಗೊಳಿಸುವಂತೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ನನ್ನ ಪತ್ನಿಯೂ ಕೂಡ ಕೋವಿಡ್‌ ಬಾಧಿತಳಾಗಿ ಮನೆಯಲ್ಲಿರುವುದರಿಂದ ನಾನು ಹೇಗೆ ಹೆಂಗಸರ ವಾರ್ಡ್‌ಗೆ ಹೋಗಿ ಶುಚಿಗೊಳಿಸಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅವರು, ತಾಯಿಯನ್ನು ಕೂಡಲೇ ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಬೆಳಗ್ಗಿನಿಂದ ಅವರಲ್ಲಿ ಮನವಿ ಮಾಡಿಕೊಂಡಿದ್ದಾಗ್ಯೂ ಸಂಜೆ 4 ಗಂಟೆಯಾದರೂ ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವುದಿಲ್ಲ. ವಿನಾಃ ಕಾರಣ ವಿಳಂಬ ಮಾಡುತ್ತಿರುವುದು ನನ್ನ ತಾಯಿಗೇನಾದರೂ ತೊಂದರೆಯಾದಲ್ಲಿ ಇಡೀ ಸರಕಾರಿ ಆಸ್ಪತ್ರೆಯ ವ್ಯವಸ್ಥೆಯೇ ಕಾರಣವಾಗುವುದು ಎಂದು ಮೀರಾ ಅವರ ಪುತ್ರ ರವೀಂದ್ರ ಗಡಿಯಾರ್‌ ಅಳಲು ತೋಡಿಕೊಂಡರು.

ಹೆಬ್ರಿ ತಾಲೂಕು ಕೂಡ್ಲು ಗ್ರಾಮದ ಸುರೇಶ್‌ ಗೌಡ ಎಂಬವರ ತಾಯಿ ಸುಂದರಿ ಗೌಡ ಕಳೆದ ನಾಲ್ಕು ದಿನಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಇವರ ಸ್ಥಿತಿ ಗಂಭೀರವಾಗಿದೆ. ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಅವರ ಹೆಚ್ಚಿನ ಚಿಕಿತ್ಸೆಗಾಗಿ ಆ ಆಸ್ಪತ್ರೆಯಲ್ಲಿ ಅವಕಾಶ ಪಡೆದುಕೊಂಡರೂ ಸರಕಾರಿ ಆಸ್ಪತ್ರೆಯಲ್ಲಿ ಸುಂದರಿ ಗೌಡರನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆವರೆಗೂ ಬಿಟ್ಟುಕೊಡುತ್ತಿಲ್ಲ. ತನ್ನ ತಾಯಿಯ ಸ್ಥಿತಿ ಗಂಭೀರವಾಗುತ್ತಿದೆ. ಆದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸುರೇಶ್‌ ಗೌಡ ಆರೋಪಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೆ.ಎಸ್.‌ ರಾವ್‌ ಅವರು, ಸರಕಾರಿ ಆಸ್ಪತ್ರೆಗೆ ಬಂದ ರೋಗಿಗಳನ್ನು ಆದ್ಯತೆ ಮೇರೆಗೆ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಉಸಿರಾಟದ ತೊಂದರೆಯಿಂದಾಗಿ ಬಂದ ಕೂಡಲೇ ಅವರಿಗೆ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಂತರ ಆ ರೋಗಿಯ ನೋಂದಾವಣೆ ಪ್ರಕ್ರಿಯೆ ಮಾಡಲಾಗುತ್ತಿದೆ. ಅದರಂತೆ ಸುಮತಿ ಶೆಟ್ಟಿ ಅವರಿಗೆ ಕೂಡಲೇ ಚಿಕಿತ್ಸೆ ನೀಡಲಾಗಿದೆ. ಈಗ ಅವರ ಸ್ಯಾಚುರೇಷನ್‌ ಪ್ರಗತಿಯಾಗಿದೆ. ಅವರ ಸಂಬಂಧಿಕರು ಮಾಡುತ್ತಿರುವ ಆರೋಪ ನಿರಾಧಾರ ಎಂದರು. ಪ್ರಸ್ತುತ ಸರಕಾರಿ ಆಸ್ಪತ್ರೆಯಲ್ಲಿ 40 ಆಕ್ಸಿಜನ್‌ ಬೆಡ್‌, 10 ಐಸೋಲೇಷನ್‌ ಬೆಡ್‌, 8 ಜನರಲ್‌ ಬೆಡ್‌ ವ್ಯವಸ್ಥೆಯಿದೆ. ಈಗಿರುವ 22 ಬೆಡ್‌ಗಳು ಪ್ರಸ್ತುತ ರೋಗಿಗಳ ಚಿಕಿತ್ಸೆಗಾಗಿ ಲಭ್ಯವಿದೆ. ಆದರೆ, ಐಸಿಯು ಬೆಡ್‌ ಖಾಲಿಯಿರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News