ಉಡುಪಿಯ ಪತ್ರಕರ್ತರಿಗೆ ಉಚಿತ ಕೋವಿಡ್ ಲಸಿಕೆ ಅಭಿಯಾನ
ಉಡುಪಿ, ಮೇ 12: ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರನ್ನು ರಾಜ್ಯ ಸರಕಾರ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಎಂಬುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಉಡುಪಿ ಜಿಲ್ಲೆಯ ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರಿಗೆ ಉಚಿತ ಕೋವಿಶೀಲ್ಡ್ ಡೋಸನ್ನು ನೀಡಲಾಯಿತು.
ಉಡುಪಿಯ ಬ್ರಹ್ಮಗಿರಿ ಪ್ರೆಸ್ಕ್ಲಬ್ ಸಮೀಪದ ಐಎಂಎ ಭವನದಲ್ಲಿ ನಡೆದ ಉಚಿತ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 130 ಮಂದಿ ಪತ್ರಕರ್ತರು ಹಾಗೂ ಟಿವಿ ಮಾಧ್ಯಮದವರು ಮೊದಲ ಡೋಸನ್ನು ಪಡೆದುಕೊಂಡರು. ಅದೇ ರೀತಿ ಮೊದಲ ಡೋಸ್ ಪಡೆದು ಅವಧಿ ಮುಗಿದವರು ಎರಡನೇ ಡೋಸ್ ಕೂಡ ಇದೇ ಸಂದರ್ಭದಲ್ಲಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡಾ, ಜಿಲ್ಲಾ ಕೊರೋನಾ ಲಸಿಕಾ ನೋಡೆಲ್ ಅಧಿಕಾರಿ ಡಾ.ಎಂ.ಜಿ.ರಾಮ, ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.