ಜೋರ್ಡನ್‍ನ ಹಳೆಯ ವೀಡಿಯೋವನ್ನು ಬಳಸಿ ಫೆಲೆಸ್ತೀನ್‍ನಲ್ಲಿ ಸಾವುನೋವು ಸಂಭವಿಸಿಲ್ಲ ಎಂದು ಬಿಂಬಿಸುವ ಯತ್ನ

Update: 2021-05-12 12:34 GMT

ಹೊಸದಿಲ್ಲಿ: ಫೆಲೆಸ್ತೀನ್ ಹಾಗೂ ಇಸ್ರೇಲ್ ನಡುವೆ  ಕಳೆದ ಕೆಲ ದಿನಗಳಿಂದ ಉದ್ಭವಿಸಿರುವ ಸಂಘರ್ಷಮಯ ವಾತಾವರಣ ಹಾಗೂ ಎರಡೂ ದೇಶಗಳು ಪರಸ್ಪರ ಸರಣಿ ವಾಯು ದಾಳಿಗಳಲ್ಲಿ ತೊಡಗಿರುವ ಪರಿಣಾಮ  ಹಲವಾರು ಫೆಲೆಸ್ತೀನೀಯರು ಬಲಿಯಾಗಿ ನೂರಾರು ಮಂದಿ ಗಾಯಗೊಂಡಿರುವ ಹೊರತಾಗಿಯೂ ಫೆಲೆಸ್ತೀನ್ ಕಡೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಪ್ಪಾಗಿ ಬಿಂಬಿಸುವ ಯತ್ನವಾಗಿ  ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ವೀಡಿಯೋದಲ್ಲಿ ಕೆಲ ಜನರ ಒಂದು ಗುಂಪು ಮೃತದೇಹವೊಂದನ್ನು ಹೊತ್ತು ಶವಯಾತ್ರೆಯಲ್ಲಿ ಸಾಗುತ್ತಿರುವಂತೆಯೇ  ಸತ್ತಿದ್ದಾನೆಂದು ತಿಳಿಯಲಾದ ವ್ಯಕ್ತಿ ಜೀವಂತವಾಗಿರುವುದು ತಿಳಿದು ಬರುತ್ತದೆ.

"ಇಂದು ಗಾಝಾದಲ್ಲಿ ಫೆಲೆಸ್ತೀನೀಯರು  ಅಂತ್ಯಕ್ರಿಯೆಯೊಂದರಲ್ಲಿರುವಂತೆ ತೋರ್ಪಡಿಸಿಕೊಂಡು ಅದರ ಛಾಯಾಚಿತ್ರವನ್ನೂ ತೆಗೆದು ಎಲ್ಲರೂ ಅವರ ಮೇಲೆ ಕರುಣೆ ತೋರುವಂತೆ ಮಾಡಿದ್ದರು. ಆದರೆ ನಂತರ ಒಂದು ಸೈರನ್ ಸದ್ದಾಯಿತು" ಎಂದು ವೀಡಿಯೋ ಜತೆಗೆ ಮೋರ್ ಎಲ್ಹರರ್ ಎಂಬವರು ಪೋಸ್ಟ್ ಮಾಡಿದ್ದಾರೆ.

ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಕೂಡ ಅದನ್ನು ಪೋಸ್ಟ್ ಮಾಡಿ  "ಇದು ಸಮಸ್ಯೆಯ ಒಂದು ಭಾಗ. ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಕಂಪ ಗಿಟ್ಟಿಸಲು ಫೆಲೆಸ್ತೀನೀ ಅರಬ್  ಯತ್ನ ಮುಂದುವರಿದಿದೆ. ಹಲವಾರು ಅಂತರಾಷ್ಟ್ರೀಯ ಮಾಧ್ಯಮ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಿಗರು ಈ ಬಲೆಗೆ ಬೀಳುತ್ತಿದ್ದಾರೆ" ಎಂದು ಬರೆದಿದ್ದಾರೆ.

ಈ ನಿರ್ದಿಷ್ಟ ವೀಡಿಯೋವನ್ನು ಇಸ್ರೇಲ್‍ನ ಹಲವು ಪ್ರಮುಖರು ಕೂಡ ಪೋಸ್ಟ್ ಮಾಡಿದ್ದಾರೆ.

ಆದರೆ ಇದೊಂದು ಹಳೆಯ ವೀಡಿಯೋ ಆಗಿದ್ದು ಮಾರ್ಚ್ 24, 2020ರಂದು ಟ್ವಿಟ್ಟರಿಗರೊಬ್ಬರು ಅದನ್ನು ಪೋಸ್ಟ್ ಮಾಡಿದ್ದರಲ್ಲದೆ ಜೋರ್ಡನ್ ಯುವಕರು  ಕೋವಿಡ್ ಲಾಕ್ ಡೌನ್ ಸಂದರ್ಭ ಮನೆಯಿಂದ ಹೊರಗೆ ಬರಲು ಈ ಅಣಕು ಶವಯಾತ್ರೆ ಆಯೋಜಿಸಿದ್ದರು. ಆದರೆ ಸೈರನ್ ಸದ್ದು ಕೇಳುತ್ತಿದ್ದಂತೆಯೇ ಅವರು ಓಡುವುದು ವೀಡಿಯೋದಲ್ಲಿ ಕಾಣಿಸುತ್ತದೆ ಎಂದು  ಬರೆದಿದ್ದಾರೆ.

ಫೆಲೆಸ್ತೀನ್‌ ನಲ್ಲಿ ಯಾವುದೇ ಸಾವುನೋವು ಸಂಭವಿಸುತ್ತಿಲ್ಲ ಎಂಬ ರೀತಿಯಲ್ಲಿ ಬಿಂಬಿಸಲು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಯತ್ನ ನಡೆಯುತ್ತಿದೆ. ಈ ನಡುವೆ ತೇಜಸ್ವಿ ಸೂರ್ಯ, ಸಿಟಿ ರವಿ ಸೇರಿದಂತೆ ಬಿಜೆಪಿ ಮುಖಂಡರು ಇಸ್ರೇಲ್‌ ಪರ ಪೋಸ್ಟ್‌ ಗಳನ್ನು ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News