×
Ad

ಉಡುಪಿ ಜಿಲ್ಲೆಯ ನಾಲ್ಕು ಇಂದಿರಾ ಕ್ಯಾಂಟಿನ್‌ಗಳಲ್ಲಿ ಉಚಿತ ಊಟ

Update: 2021-05-12 19:25 IST

ಉಡುಪಿ, ಮೇ 12: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶ ದಂತೆ ಮೇ 11ರಿಂದ ಉಡುಪಿ ಜಿಲ್ಲೆಯ ಒಟ್ಟು ನಾಲ್ಕು ಇಂದಿರಾ ಕ್ಯಾಂಟಿನ್ ಗಳಲ್ಲಿ ನೂರಾರು ಮಂದಿಗೆ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಗಳನ್ನು ಕಲ್ಪಿಸಲಾಗಿದೆ.

ಉಡುಪಿ ನಗರದಲ್ಲಿರುವ ಕ್ಯಾಂಟಿನ್‌ನಲ್ಲಿ ಬೆಳಗ್ಗೆ 400 ಉಪಹಾರ, ಮಧ್ಯಾಹ್ನ 200 ಊಟ ಮತ್ತು ರಾತ್ರಿ 100 ಊಟಗಳನ್ನು ಪ್ರತಿದಿನ ಸಿದ್ಧಪಡಿಸಲಾಗುತ್ತದೆ. ಅದರಲ್ಲಿ ಇಂದು ಬೆಳಗ್ಗೆ 400 ಇಂಡ್ಲಿ ರೈಸ್‌ಬಾತ್‌ಗಳನ್ನೊಳಗೊಂಡ ಉಪಹಾರ, ಮಧ್ಯಾಹ್ನ ಅನ್ನ, ಸಾಂಬಾರು ಉಪ್ಪಿನರಕಾಯಿ ಮೊರಸನ್ನ ಸಹಿತ 161 ಊಟ ಖಾಲಿಯಾಗಿದೆ. ಮೇ 11ರಂದು ಬೆಳಗ್ಗೆ 153 ಉಪಹಾರ, ರಾತ್ರಿ 97 ಮಂದಿ ಊಟ ತೆಗೆದುಕೊಂಡು ಹೋಗಿದ್ದಾರೆ.

ಮಣಿಪಾಲದಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರತಿದಿನ 350 ಉಪಹಾರ, ಮಧ್ಯಾಹ್ನ 200 ಊಟ ಮತ್ತು ರಾತ್ರಿ 100 ಊಟಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ಮೇ 11ರಂದು ಬೆಳಗ್ಗೆ 326 ಉಪಹಾರ, ಮಧ್ಯಾಹ್ನ 116 ಊಟ, ರಾತ್ರಿ 84 ಊಟ ಮತ್ತು ಇಂದು ಬೆಳಗ್ಗೆ 350 ಉಪಹಾರ, ಮಧ್ಯಾಹ್ನ 182 ಊಟ ಖಾಲಿಯಾಗಿದೆ. ಅದೇ ರೀತಿ ಕುಂದಾಪುರ ಹಾಗೂ ಕಾರ್ಕಳದಲ್ಲೂ ಉಚಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಸರಕಾರ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ವ್ಯವಸ್ಥೆ ಮಾಡಿದ ನಂತರ ಹೆಚ್ಚು ಜನ ಇದನ್ನು ಅವಲಂಬಿಸಿಕೊಂಡಿದ್ದಾರೆ. ಉಡುಪಿ ಕ್ಯಾಂಟಿನ್‌ನಲ್ಲಿ ಮೊದಲು ಬೆಳಗ್ಗೆ 400ರಲ್ಲಿ 370ವರೆಗೆ ಉಪಹಾರ ಹೋಗುತ್ತಿತ್ತು. ಆಗ 9ಗಂಟೆಯವರೆಗೆ ಕ್ಯಾಂಟಿನ್ ತೆರೆದಿಡಲಾಗುತ್ತಿತ್ತು. ಈಗ 8.30ಕ್ಕೆ ಬಂದ್ ಮಾಡಲಾಗುತ್ತದೆ. ಮಧ್ಯಾಹ್ನ 3.15ರವರೆಗೆ ಇರುತ್ತದೆ. ಖಾಲಿಯಾದರೆ ಬೇಗವೇ ಬಂದ್ ಮಾಡ ಲಾಗುತ್ತದೆ ಎನ್ನುತ್ತಾರೆ ಕ್ಯಾಂಟಿನ್ ಉಸ್ತುವಾರಿ ಶಾಂತಾರಾಮ್ ಶೆಟ್ಟಿ.

ಬೆಳಗ್ಗೆ 10ಗಂಟೆಯವರೆಗೆ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಹೆಚ್ಚು ಮಂದಿ ಬಂದು ಉಪಹಾರ ತೆಗೆದುಕೊಂಡು ಹೋಗುತ್ತಾರೆ. ಬೆಳಗ್ಗೆ 10 ಗಂಟೆಯ ನಂತರ ತಿರುಗಾಟಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಕ್ಯಾಂಟಿನ್‌ಗೆ ಬರುವರ ಸಂಖ್ಯೆ ಕೂಡ ಕಡಿಮೆ ಆಗಿರುತ್ತದೆ. ಹೆಚ್ಚು ಮಂದಿಗೆ ಇಲ್ಲಿ ಉಚಿತ ಸಿಗುವುದು ಗೊತ್ತಿಲ್ಲ. ಮುಂದೆ ಹೆಚ್ಚು ಹೆಚ್ಚು ಜನ ಬರುವ ನಿರೀಕ್ಷೆ ೂಡ ಇದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನವರು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ನೀರಿನ ವ್ಯವಸ್ಥೆ ಇಲ್ಲದವರು, ಮನೆ ಇಲ್ಲದವರು ಮತ್ತು ಅಗತ್ಯ ಇರುವವರು ಮಾತ್ರ ಇಲ್ಲೇ ಸೇವಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಉಳಿದುಕೊಂಡವರು, ವಲಸೆ ಕಾರ್ಮಿಕರು, ರೂಮ್ ಮಾಡಿಕೊಂಡವರು, ಹೊಟೇಲಿನಲ್ಲಿ ಉಳಿದುಕೊಂಡವರು, ಕೋರ್ಟ್ ನವರು, ಸೂಪರ್ ಬಜಾರ್‌ಗಳ ನೌಕರರು ಇಲ್ಲೇ ಬಂದು ಉಪಹಾರ ಸೇವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News