×
Ad

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ

Update: 2021-05-12 19:48 IST

ಉಡುಪಿ, ಮೇ 12: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯ ಹವಾಮಾನ ಇಲಾಖೆಯ ವರದಿಯಂತೆ ಮೇ 14ರಿಂದ 16ರವರೆಗೆ ಮೂರು ದಿನಗಳ ಅವಧಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾಗುವ ವಾಯು ಭಾರ ಕುಸಿತದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದ್ದು, ಇದರ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗೃತಾ ಕ್ರಮ ವಹಿಸಬೇಕಾಗಿದೆ.

ಇದರಿಂದಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚುಗಳಿಂದ ಕೂಡಿದ ಭಾರೀ ಮಳೆ (64.4ಮಿ.ಮಿ.ನಿಂದ 115.5ಮಿ.ಮೀ.) ಸುರಿಯುವ ಸಾಧ್ಯತೆ ಇದೆ. ಚಂಡಮಾರುತ ರೂಪುಗೊಂಡು ಜಿಲ್ಲೆಯನ್ನು ಹಾದುಹೋಗುವ ಸಂಭವವಿರುವುದರಿಂದ ಮೇ 15,16 ಮತ್ತು 17ರಂದು ಬಿರುಗಾಳಿ- ಮಿಂಚುಗಳೊಂದಿಗೆ ಅನೇಕ ಪ್ರದೇಶಗಳಲ್ಲಿ 115.6ರಿಂದ 204.4ಮೀ.ಮೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಹೀಗಾಗಿ ಸಾರ್ವಜನಿಕರಿಗೆ ಈ ಕೆಳಕಂಡ ಎಚ್ಚರಿಕೆ ಹಾಗೂ ಸೂಚನೆಗಳನ್ನು ನೀಡಲಾಗಿದೆ.

ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡೆಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಕೋಪವನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ಮೀನುಗಾರರು ನದಿ, ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ/ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳನ್ನು ತಲುಪಬೇಕು.

ತುರ್ತು ಸೇವೆಗಾಗಿ 1077 ಅಥವಾ ದೂರವಾಣಿ ಸಂಖ್ಯೆ: 0820- 2574802ನ್ನು ಸಂಪರ್ಕಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News