ಪ್ರಧಾನಿ ಮೋದಿ ಟ್ವಿಟರ್‌ ನಲ್ಲಿ ಫಾಲೋ ಮಾಡುತ್ತಿದ್ದ RSS ಕಾರ್ಯಕರ್ತ ಕೋವಿಡ್‌ ಗೆ ಬಲಿ

Update: 2021-05-12 15:10 GMT
Photo: the print

ಆಗ್ರಾ : ಆಗ್ರಾ ನಿವಾಸಿ ಅಮಿತ್ ಜೈಸ್ವಾಲ್ ಅವರ ಕಾರಿನ ಹಿಂಬದಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ರಾರಾಜಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯ ಪೋಸ್ಟರ್ ಈಗ ಕಾಣಿಸುತ್ತಿಲ್ಲ.  ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಹಾಗೂ ಟ್ವಿಟ್ಟರ್‍ನಲ್ಲಿ ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದ ಜೈಸ್ವಾಲ್ ಕೆಲ ದಿನಗಳ ಹಿಂದೆ ಮಥುರಾದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ನಂತರ ಜೈಸ್ವಾಲ್ ಅವರ ಸೋದರಿ ಮತ್ತಾಕೆಯ ಗಂಡ  ಆತನ ಕಾರಿನ ಹಿಂಬದಿಯಲ್ಲಿದ್ದ ಮೋದಿ ಪೋಸ್ಟರ್ ಅನ್ನು ಹರಿದು ಹಾಕಿದ್ದಾರೆ.

ಕೋವಿಡ್ ಸೋಂಕಿಗೆ ತುತ್ತಾಗಿ ಸಮಸ್ಯೆಗೀಡಾಗಿದ್ದ ಜೈಸ್ವಾಲ್‍ಗೆ ಆಸ್ಪತ್ರೆಯಲ್ಲಿ ಬೆಡ್  ದೊರೆಯದೆ ಕುಟುಂಬ ಜೈಸ್ವಾಲ್ ಟ್ವಿಟ್ಟರ್ ಖಾತೆಯಿಂದ ಮನವಿ ಸಲ್ಲಿಸಿ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ್ ಅವರನ್ನೂ ಟ್ಯಾಗ್ ಮಾಡಿತ್ತು. ಆದರೆ ಯಾವುದೇ  ಸಹಾಯ ದೊರಕಿರಲಿಲ್ಲ ಎಂದು ಕುಟುಂಬ ಆರೋಪಿಸಿದೆ.

ಎಪ್ರಿಲ್ 29ರಂದು ಮಥುರಾದ ನಿಯತಿ ಆಸ್ಪತ್ರೆಯಲ್ಲಿ 42 ವರ್ಷದ ಜೈಸ್ವಾಲ್ ಮೃತಪಟ್ಟರೆ  ಹತ್ತು ದಿನಗಳ ನಂತರ ಆತನ ತಾಯಿಯೂ ಸೋಂಕಿಗೆ ಬಲಿಯಾಗಿದ್ದಾರೆ. ಜೈಸ್ವಾಲ್‌ ರ ವಾಟ್ಸಾಪ್‌ ಡಿಪಿಯಲ್ಲೂ ಪ್ರಧಾನಿ ಮೋದಿಯ ಚಿತ್ರವೇ ಇದೆ. ಯಾರಾದರೂ ನರೇಂದ್ರ ಮೋದಿಗೆ ಅಥವಾ ಬಿಜೆಪಿಗೆ ಬೈದರೆ ಕೂಡಲೇ ಆತ ಆಕ್ರೋಶಿತನಾಗಿ ಅವರ ಮೇಲೆ ಹಲ್ಲೆ ನಡೆಸಲೂ ಮುಂದಾಗುತ್ತಿದ್ದ ಎಂದು ಆತನ ಸಂಬಂಧಿಕರು ಹೇಳುತ್ತಾರೆ.

"ಅಮಿತ್‌ ತನ್ನ ಸಂಪೂರ್ಣ ಜೀವನವನ್ನು ಮೋದಿಗಾಗಿ ಮೀಸಲಿಟ್ಟಿದ್ದ. ಆತನಿಗಾಗಿ ಮೋದಿ ಏನು ಮಾಡಿದ್ದಾರೆ? ಇಂತಹಾ ಪ್ರಧಾನಮಂತ್ರಿಯಿಂದ ನಮಗಿರುವ ಉಪಯೋಗವಾದರೂ ಏನು? ನಾವು ಮೋದಿಯ ಪೋಸ್ಟರ್‌ ಅನ್ನು ಹರಿದು ಹಾಕಿದ್ದೇವೆ" ಎಂದು ಅಮಿತ್‌ ರ ಭಾವ ರಾಜೇಂದ್ರ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News