ದ.ಕ.ಜಿಲ್ಲೆ: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕೋವಿಡ್‌ಗೆ ಉಚಿತ ಚಿಕಿತ್ಸೆ
ಮಂಗಳೂರು, ಮೇ 12:ದ.ಕ.ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ 80 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕಾಯಿಲೆಯಿಂದ ಬಳಲುತ್ತಿರುವ, ಐಸಿಯು/ ವೆಂಟಿಲೇಟರ್‌ನಲ್ಲಿ ಚಿಕಿತೆ ಪಡೆಯುತ್ತಿರುವ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ. ಈ ರೋಗಿಗಳು ತಮ್ಮ ಹೆಸರಿನ ಆಧಾರ್ ಕಾರ್ಡ್ ಮೂಲ ಪ್ರತಿಯನ್ನು ದಾಖಲಾತಿ ಸಮಯದಲ್ಲಿ ಹಾಜರಿಪಡಿಸಬೇಕಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಜನರಲ್ ವಾರ್ಡ್/ಹೆಚ್‌ಡಿ.ಯು ಬೆಡ್‌ಗಳು ಖಾಲಿ ಇಲ್ಲದಿದ್ದಲ್ಲಿ ರೆಫೆರಲ್ ಪತ್ರವನ್ನು ಪಡೆದುಕೊಂಡಲ್ಲಿ ಮಾತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಸ್ಪೆಷಲ್ ವಾರ್ಡ್/ ಸೆಮಿ ಪ್ರೈವೇಟ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಕೋವಿಡ್ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುವುದು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯ ಪಡೆಯಲು ರೋಗಿ ಅಥವಾ ರೋಗಿಯ ಕಡೆಯವರು ದಾಖಲಾತಿ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಮಿತ್ರ, ಜಿಲ್ಲಾ ಸಂಯೋಜಕರು ಹಾಗೂ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು.
ಮಾಹಿತಿಗಾಗಿ ಕುಷ್ಠ ರೋಗ ನಿವಾರಣೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಕಚೇರಿಯ (ದೂ.ಸಂ: 0824-2423818 ಹಾಗೂ dlodkn@gmail.com ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.