×
Ad

ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು: ಸಚಿವ ಕೋಟ

Update: 2021-05-12 22:15 IST

ಮಂಗಳೂರು, ಮೇ 12: ಕೊರೋನ ನಿಯಂತ್ರಣಕ್ಕಾಗಿ ಗ್ರಾಮ ಮಟ್ಟದ ಪ್ರತಿಯೊಂದು ಕಾರ್ಯಪಡೆಯು ಸಕ್ರಿಯವಾಗಿ ಕಾರ್ಯವನ್ನು ಜಿಲ್ಲೆಯನ್ನು ಕೊರೋನ ಮುಕ್ತಗೊಳಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳೂರು, ಪುತ್ತೂರು, ಕಡಬ, ಮೂಡುಬಿದಿರೆ, ಬಂಟ್ವಾಳ ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಸಹಿತ ಗ್ರಾಮಮಟ್ಟದ ಟಾಸ್ಕ್‌ಪೋರ್ಸ್ ಸಮಿತಿಯ ಸದಸ್ಯರೊಂದಿಗೆ ಕೋವಿಡ್-19 ನಿಯಂತ್ರಣ ಕುರಿತು ದ.ಕ.ಜಿಪಂ ಕಚೇರಿಯಲ್ಲಿ ಬುಧವಾರ ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದವರು ಕೊರೋನ ಕರ್ಪ್ಯೂ ಜಾರಿಯಿಂದಾಗಿ ಮರಳಿ ತಮ್ಮ ಸ್ವಂತ ಊರುಗಳಿಗೆ ಬರುತ್ತಿದ್ದಾರೆ. ಅಂತಹವರ ಆರೋಗ್ಯ ಕ್ಷೇಮದ ಬಗ್ಗೆ ನಿಗಾ ವಹಿಸುವುದರೊಂದಿಗೆ ಸಾಮಾನ್ಯ ಕೊರೋನ ರೋಗಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಮತ್ತು ವರದಿ ಬರುವ ತನಕ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಅವರು ಅನಗತ್ಯವಾಗಿ ಹೊರಗೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.

ಆಯಾ ಗ್ರಾಪಂ ವ್ಯಾಪ್ತಿಯ ಪಿಡಿಒ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸಕ್ರಿಯವಾಗಿ ಸಭೆಗಳನ್ನು ನಡೆಸವ ಮೂಲಕ ಕೋವಿಡ್ ನಿಗ್ರಹಕ್ಕೆ ಶ್ರಮಿಸಬೇಕು.ಒಂದೇ ಮನೆಯಲ್ಲಿ ಐದಕ್ಕಿಂತ ಹೆಚ್ಚಿನ ಜನರಿಗೆ ಕೊರೋನ ಪಾಸಿಟಿವ್ ದೃಢಪಟ್ಟರೆ ಅಂತಹವರನ್ನು ಹೋಂ ಐಸೋಲೇಶನ್‌ನಲ್ಲಿರಿಸಬೇಕು.ಅಗತ್ಯ ಕಂಡುಬಂದಲ್ಲಿ ಅವರನ್ನು ಕೋವಿಡ್‌ಕೇರ್ ಸೆಂಟರ್‌ಗೆ ವರ್ಗಾಯಿಸಬೇಕು. ಆ ಗ್ರಾಮವನ್ನು ಮೈಕ್ರೋಕಂಟೈನ್ಮೆಂಟ್ ರೆನ್ ಎಂದು ಪರಿಗಣಿಸಬೇಕು. ಅಲ್ಲದೆ ಆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರವರನ್ನು ಗುರುತಿಸಿ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

14 ನೇ ಹಣಕಾಸು ಆಯೋಗದ ಉಳಿಕೆ ಮೊತ್ತ ಹಾಗೂ ಗ್ರಾಪಂನ ಉಳಿಕೆ ಹಣದಿಂದ ಗ್ರಾಪಂ ವ್ಯಾಪ್ತಿಯ ಕೊರೋನ ಸೋಕಿತರಿಗೆ ಅಗತ್ಯ ಮೂಲಭೂತಸೌಕರ್ಯಗಳು, ಆಹಾರ ಸರಬರಾಜು ಮತ್ತು ಹೆಲ್ತ್ ಕಿಟ್‌ಗಳನ್ನು ನೀಡಬೇಕು ಎಂದ ಸಚಿವ ಕೋಟ ಲಸಿಕೆ ನೀಡುವಾಗ ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಬೇಕು. 18 ರಿಂದ 44 ವರ್ಷ ವಯೋಮಿತಿಯವರಿಗೆ ಕೊರೋನ ರೋಗ ನಿರೋಧಕ ಲಸಿಕೆಯನ್ನು ಕಡ್ಡಾಯ ನೋಂದಣಿ ಮೂಲಕ ನೀಡಬೇಕು. ವಿಕಲಚೇತನರು ಹಾಗೂ ನೋಂದಣಿ ಮಾಡಲು ಗೊತ್ತಿಲ್ಲದವರು ನೇರವಾಗಿ ಗ್ರಾಪಂಗೆ ತೆರಳಿ ಅಲ್ಲಿನ ಸಿಬ್ಬಂದಿಯ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ, ಜಿಪಂ ಸಿಇಒ ಡಾ. ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ರಾಜ್ಯ ಮತ್ತು ಕೇಂದ್ರ ಸರಕಾರದ ಆಹಾರ ಪಡಿತರವನ್ನು ಅರ್ಹರಿಗೆ ತಪ್ಪದೆ ನೀಡಬೇಕು. ನ್ಯಾಯಬೆಲೆ ಅಂಗಡಿಯನ್ನು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ನೀಡಲು ಸಾಧ್ಯವಾಗದಿದ್ದರೆ ಮಧ್ಯಾಹ್ನ 12 ಗಂಟೆಯವರೆಗೆ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News