ಸಕಾರಾತ್ಮಕ ಚಿಂತನೆಯ ಪ್ರಸಾರದ ಹೆಸರಲ್ಲಿ ಕೇಂದ್ರದಿಂದ ಜನತೆಗೆ ವಂಚನೆ: ರಾಹುಲ್ ಗಾಂಧಿ ಟೀಕೆ

Update: 2021-05-12 16:57 GMT

ಹೊಸದಿಲ್ಲಿ, ಮೇ 12: ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧ ಮತ್ತು  ಆಮ್ಲಜನಕ ಕೊರತೆಯಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡರೆ ಮನಸ್ಸು ನಿರಾಳವಾಗುತ್ತದೆ ಎಂದು ಕೇಂದ್ರ ಸರಕಾರ ಮಾಡುತ್ತಿರುವ ಪ್ರಚಾರ ಜನತೆಗೆ ಮಾಡಿರುವ ವಂಚನೆಯಾಗಿದೆ. ದೇಶದಲ್ಲಿ ಮತ್ತು ವಿದೇಶದಲ್ಲಿ ತನಗೆ  ಎದುರಾಗಿರುವ ಟೀಕೆಯನ್ನು ಮರೆಮಾಚಲು ಕೇಂದ್ರ ಸರಕಾರ  ಮರಳಿನಲ್ಲಿ ತಲೆ ಹುದುಗಿಸಿಕೊಂಡ ಪಕ್ಷಿಯಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ದೇಶದಲ್ಲಿ ಉಲ್ಬಣಗೊಂಡಿರುವ ಕೊರೋನ ಸೋಂಕಿನ ಎರಡನೇ ಅಲೆಯನ್ನು ನಿರ್ವಹಿಸಿರುವ ರೀತಿಗೆ ರಾಷ್ಟಮಟ್ಟದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ವ್ಯಕ್ತವಾಗಿರುವ ಟೀಕಾಪ್ರಹಾರವನ್ನು ಎದುರಿಸಲು ಆಡಳಿತಾರೂಢ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರೆಸ್ಸೆಸ್ ರಚನಾತ್ಮಕ, ಸಕಾರಾತ್ಮಕ ಚಿಂತನೆ ಎಂಬ ಹೊಸ ಕಾರ್ಯತಂತ್ರ ರೂಪಿಸಿದೆ ಎಂಬ ವರದಿಗೆ ರಾಹುಲ್  ಪ್ರತಿಕ್ರಿಯಿಸುತ್ತಿದ್ದರು.

ವರದಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್,  ಸಕಾರಾತ್ಮಕ ಚಿಂತನೆಯ ಪ್ರಸಾರದ  ನೆಪದಲ್ಲಿ ಸರಕಾರ ಸುಳ್ಳು ಸುದ್ಧಿ ಪ್ರಚಾರ ಮಾಡುತ್ತಿರುವುದು ಅತ್ಯಂತ ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದ ರಚನಾತ್ಮಕ ಕಾರ್ಯಗಳನ್ನು ಎತ್ತಿತೋರಿಸುವ ಮತ್ತು ಈ ಬಗ್ಗೆ ಪ್ರಚಾರ ನೀಡುವ ಕುರಿತು    ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗೂ ಸೇರಿದಂತೆ ಕೇಂದ್ರ ಸರಕಾರದ ಸಿಬಂದಿಗಳಿಗೆ  ಕಳೆದ ವಾರ ಕಾರ್ಯಾಗಾರವೊಂದನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ.

ಇದಕ್ಕೆ ಪೂರಕವಾಗಿ ಕೇಂದ್ರದ ಸಚಿವರು ಆಮ್ಲಜನಕ ಸಾಗಿಸುವ ವಾಹನಗಳ(ಆಕ್ಸಿಜನ್ ಎಕ್ಸ್ಪ್ರೆಸ್) ಚಲನವಲನ, ಕೋವಿಡ್-19 ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ನಡೆಸುವ ಮಾಸಿಕ `ಮನ್ ಕಿ ಬಾತ್' ಕಾರ್ಯಕ್ರಮದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲೂ ರಚನಾತ್ಮಕ ಕಾರ್ಯ ಮತ್ತು ಸಕಾರಾತ್ಮಕ ಚಿಂತನೆಯ ಪ್ರಬಲ  ಸಂದೇಶವನ್ನು ಪ್ರಸಾರ ಮಾಡುವ ಅಗತ್ಯದ ಬಗ್ಗೆ ಉಲ್ಲೇಖಿಸಲಾಗಿದೆ.

ಈ ಕಾರ್ಯತಂತ್ರದ ಭಾಗವಾಗಿ, ಮಂಗಳವಾರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ಪತ್ರದಲ್ಲಿ ಪಿಎಂ ಕೇರ್ಸ್ ಫಂಡ್ ನ ಅಡಿ ಖರೀದಿಸಿದ ವೆಂಟಿಲೇಟರ್ಗಳ ಹಂಚಿಕೆ, ಆಮ್ಲಜನಕ ಬಿಕ್ಕಟ್ಟು ಎದುರಿಸಲು ಕೇಂದ್ರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.

ಇದರ ಜೊತೆಗೆ , ಆರೆಸ್ಸೆಸ್ ʼಪೊಸಿಟಿವಿಟಿ ಅನ್ಲಿಮಿಟೆಡ್' ಎಂಬ ಆನ್ಲೈನ್ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಧಾರ್ಮಿಕ ಗುರುಗಳು, ಮಾರ್ಗದರ್ಶಕರು, ಪ್ರಮುಖ ಕೈಗಾರಿಕೋದ್ಯಮಿಗಳಿಂದ ಭಾಷಣ ಮತ್ತು ಉಪನ್ಯಾಸವಿರುತ್ತದೆ. ಆರೆಸ್ಸೆಸ್

ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಉಪನ್ಯಾಸ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News