ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ: ಶಾಸಕ ಭರತ್ ಶೆಟ್ಟಿ
ಸುರತ್ಕಲ್, ಮೇ 12: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಸೋಂಕು ಪತ್ತೆ ಕೇಂದ್ರ ಹಾಗೂ ಚಿಕಿತ್ಸೆಗೆ ಬೇಕಾದ ಸುಸಜ್ಜಿತ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ಬುಧವಾರ ಶಾಸಕ ಡಾ.ಭರತ್ ಶೆಟ್ಟಿ ವೈ, ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸುರತ್ಕಲ್, ಕುಳಾಯಿ ಮತ್ತು ಕುಂಜತ್ತಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಭರತ್ ಶೆಟ್ಟಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು, ಸೋಂಕಿತ ಗಂಟಲು ದ್ರವ ಪರೀಕ್ಷೆಗೆ ಪ್ರತ್ಯೇಕ ಸ್ಥಳ ಗುರುತಿಸಿ ಕಿಯೋನಿಕ್ಸ್ ಒದಗಿಸಲಾಗುವುದು. ಅಲ್ಲದೆ ಸೋಂಕಿತರ ಪತ್ತೆಗೆ ಮನೆ ಮನೆಗೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ವೈದ್ಯರಿಗೆ ಚಿಕಿತ್ಸೆ ನೀಡುವ ಜವಾಬ್ದಾರಿ ಹಾಗೂ ಪ್ರತೀ ಆರೋಗ್ಯ ಕೇಂದ್ರಗಳಿಗೆ ನೋಡಲ್ ಅಧಿಕಾರಿ ನೇಮಿಸಿ ಕೇಂದ್ರಕ್ಕೆ ಬೇಕಾದ ಸೌಲಭ್ಯ, ಪರಿಕರ ಖರೀದಿಸಲಾಗುವುದು ಎಂದರು.
ಸೋಂಕು ಪತ್ತೆಯಾದವರ ಮನೆಗೆ ಸ್ಟಿಕ್ಕರ್ ಅಂಟಿಸಿ ಅವರ ಕುಟುಂಬಕ್ಕೆ ಕೌನ್ಸಿಲಿಂಗ್ ಮಾಡಲಾಗುತ್ತದೆ. ಶೇಕಡಾವಾರು ಸೋಂಕು ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿರುವುದರಿಂದ ಪ್ರತೀ ವಾರ್ಡ್ ಮತ್ತು ಆರೋಗ್ಯ ಕೇಂದ್ರಕ್ಕೆ ನೋಡಲ್ ಅಧಿಕಾರಿ ಹಾಗೂ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಅವರ ತಪಾಸಣೆ ಮಾಡಲಾಗುವುದಕ್ಕಾಗಿ ಮೊಬೈಲ್ ತಂಡವಿದ್ದು ವಾಹನ ಮತ್ತಿತರ ಸೌಲಭ್ಯ ನೀಡಲಾಗುತ್ತದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾದರಿಯಾಗಿ ರೂಪಿಸಲಾಗಿದ್ದು, ಲಸಿಕೆ ಪಡೆಯಲು ಬರುವವರಿಗೆ ಪೆಂಡಾಲ್, ಆಸನ, ನೀರಿನ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಚಿಕಿತ್ಸೆಗೆ ಬರುವ ಗರ್ಭಿಣಿಯರಿಗೆ, ಹಿರಿಯರಿಗೆ ತೊಂದರೆಯಾಗದಂತೆ ಕೋವಿಡ್ ಕೇಂದ್ರದ ಚಿಕಿತ್ಸೆಗೆ, ಗಂಟಲು ದ್ರವ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭ ಉಪಮೇಯರ್ ಸುಮಂಗಳ ರಾವ್, ಮಾಜಿ ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶೋಭಾ ರಾಜೇಶ್,ಲೋಕೇಶ್ ಬೊಳ್ಳಾಜೆ, ಶರತ್, ಪಾಲಿಕೆ ಸದಸ್ಯರಾದ ನಯನಾ ಆರ್.ಕೋಟ್ಯಾನ್, ವರುಣ್ ಚೌಟ, ಶ್ವೇತಾ, ಸರಿತಾ ಶಶಿಧರ್, ಲಕ್ಷ್ಮಿಶೇಖರ್ ದೇವಾಡಿಗ, ಸುಮಿತ್ರಾ ಕರಿಯ, ಕಿರಣ್ ಕುಮಾರ್ ಕೋಡಿಕಲ್, ಲೋಹಿತ್ ಅಮೀನ್ ಉಪಸ್ಥಿತರಿದ್ದರು.