44 ದೇಶಗಳಲ್ಲಿ ಕೋವಿಡ್ ಭಾರತೀಯ ಪ್ರಬೇಧ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-05-12 18:44 GMT

ಹೊಸದಿಲ್ಲಿ, ಮೇ 12: ಕಳೆದ ವರ್ಷ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಗುರುತಿಸಲಾದ ಕೊರೋನ ಸೋಂಕಿನ ಬಿ.1.617 ಪ್ರಬೇಧ 44 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೇಳಿದೆ.

ಕೊರೋನ ಸೋಂಕಿನ ವಿಭಿನ್ನ ಪ್ರಬೇಧಗಳು ಪ್ರಸರಣವಾಗುವ ರೀತಿಯಲ್ಲಿನ ವ್ಯತ್ಯಾಸ, ಇದರ ತೀವ್ರತೆಯಲ್ಲಿರುವ ವ್ಯತ್ಯಾಸ ಹಾಗೂ ಇದು ಜನಸಾಮಾನ್ಯರ ಆರೋಗ್ಯದ ಮೇಲೆ ಮತ್ತು ಸಾಮಾಜಿಕವಾಗಿ ಉಂಟುಮಾಡುವ ಪರಿಣಾಮಗಳ ಬಗ್ಗೆ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯಸಂಸ್ಥೆ ಆಗಿಂದಾಗ್ಗೆ ಪರಾಮರ್ಶೆ ನಡೆಸುತ್ತದೆ.

ಮೇ 1ರ ದಿನದ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ 6 ವಲಯಗಳ 44 ದೇಶಗಳು ಜಿಐಎಸ್ಎಐಡಿಗೆ ಅಪ್ಲೋಡ್ ಮಾಡಿರುವ 4,500 ಮಾದರಿಗಳ ವರದಿಯಲ್ಲಿ ಬಿ.1.617ರ ಲಕ್ಷಣದ ಬಗ್ಗೆ ಮಾಹಿತಿಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬಿ.1.617 ಪ್ರಬೇಧವನ್ನು "ವೇರಿಯೆಂಟ್ ಆಫ್ ಕನ್ಸರ್ನ್' ವಿಭಾಗದಲ್ಲಿ ವರ್ಗೀಕರಿಸಲಾಗಿದೆ.  ಈ ವಿಭಾಗದಲ್ಲಿ ವರ್ಗೀಕರಿಸಿದ ಸೋಂಕಿನ ತಳಿಗಳು, ಚೀನಾದಲ್ಲಿ 2019ರ ಅಂತ್ಯದಲ್ಲಿ ಕಂಡುಬಂದ ಸೋಂಕಿನ ತಳಿಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಈ ಪ್ರಬೇಧಗಳು ಕ್ಷಿಪ್ರವಾಗಿ ಹರಡುವ ಜೊತೆಗೆ ಲಸಿಕೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ.

ಬಿ.1.617 ಪ್ರಬೇಧ 3 ಉಪತಳಿಯನ್ನು ಒಳಗೊಂಡಿದ್ದು ಇವು ವಿಭಿನ್ನವಾಗಿದ್ದು ಅತ್ಯಧಿಕ ವೇಗವಾಗಿ ಪ್ರಸರಣವಾಗುವ ಶಕ್ತಿಯನ್ನು ಹೊಂದಿರುತ್ತವೆ. ಇದು ಮಾನವನ ಜೀವಕೋಶದೊಳಗೆ ಸುಲಭವಾಗಿ ಪ್ರವೇಶಿಸಬಲ್ಲದು. ಈ ಪ್ರಬೇಧ ಭಾರತದಲ್ಲಿ 2020ರ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಭಾರತದಲ್ಲಿ ತೀವ್ರವಾಗಿರುವ ಸೋಂಕಿನ ಎರಡನೇ ಅಲೆಯ ವರದಿಯನ್ನು ಅಧ್ಯಯನ ನಡೆಸಿದಾಗ ಬಿ.1.617ರ ಜೊತೆಗೆ ಬಿ.1.1.7, ಬಿ.1.612 ಉಪತಳಿಗಳ ಅಂಶವೂ ಕಂಡುಬಂದಿರುವುದರಿಂದ ಈ ಬಾರಿ ಸೋಂಕು ಅತ್ಯಂತ ವಿನಾಶಕಾರಿಯಾಗಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News