ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಮೇಶ್ ಪೊವಾರ್ ಮತ್ತೊಮ್ಮೆ ಆಯ್ಕೆ

Update: 2021-05-13 13:36 GMT

ಹೊಸದಿಲ್ಲಿ: ಮಾಜಿ ಸ್ಪಿನ್ನರ್ ರಮೇಶ್ ಪೊವಾರ್ ಗುರುವಾರ ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮತ್ತೊಮ್ಮೆ ನೇಮಕಗೊಂಡಿದ್ದಾರೆ. ಡಬ್ಯ್ಲು. ವಿ. ರಾಮನ್ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.

ಏಕದಿನ ನಾಯಕಿ ಮಿಥಾಲಿ ರಾಜ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ  ಮಹಿಳಾ ಕ್ರಿಕೆಟ್ ತಂಡದಿಂದ  ವಜಾಗೊಂಡಿದ್ದ ರಮೇಶ್ ಪೊವಾರ್ ಇದೀಗ  ಎರಡು ವರ್ಷಗಳ ನಂತರ ತಂಡಕ್ಕೆ ಕೋಚ್ ಆಗಿ ಮತ್ತೊಮ್ಮೆ ನೇಮಕಗೊಂಡಿದ್ದಾರೆ.

ರಾಮನ್ ಸೇರಿದಂತೆ ಎಂಟು ಅಭ್ಯರ್ಥಿಗಳನ್ನು ಸಂದರ್ಶನ ಮಾಡಿದ ನಂತರ 42 ವರ್ಷದ ಮದನ್ ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಪೊವಾರ್ ಹೆಸರನ್ನು ಶಿಫಾರಸು ಮಾಡಿದೆ.

"ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಮೇಶ್ ಪೊವಾರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾಗಿ (ಹಿರಿಯ ಮಹಿಳಾ) ನೇಮಕ ಮಾಡಿರುವುದಾಗಿ ಪ್ರಕಟಿಸಿದೆ. ಬಿಸಿಸಿಐ ಈ ಹುದ್ದೆಗೆ ಜಾಹೀರಾತು ನೀಡಿ 35 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ" ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತದ ಮಾಜಿ ವಿಕೆಟ್‌ಕೀಪರ್ ಅಜಯ್ ರಾತ್ರ ಹಾಗೂ  ಮಾಜಿ ಮುಖ್ಯ ಆಯ್ಕೆಗಾರ್ತಿ  ಹೇಮಲತಾ ಕಲಾ ಸೇರಿದಂತೆ ನಾಲ್ವರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.

"ಭಾರತದ ಮಹಿಳಾ ಕ್ರಿಕೆಟ್ ಅನ್ನು ಮುನ್ನಡೆಸಲು ಎದುರು ನೋಡುತ್ತಿದ್ದೇನೆ. ಈ ಅವಕಾಶ ನೀಡಿದ್ದಕ್ಕಾಗಿ  ಸಿಎಸಿ ಹಾಗೂ  ಬಿಸಿಸಿಐಗೆ ಧನ್ಯವಾದಗಳು" ಎಂದು ಪೊವಾರ್ ತಮ್ಮ ನೇಮಕಾತಿಯ ನಂತರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News