ಅನಿರುದ್ಧ ಸರಳತ್ತಾಯಗೆ ಸನ್ಯಾಸ ದೀಕ್ಷೆ
Update: 2021-05-13 21:56 IST
ಉಡುಪಿ, ಮೇ 13: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಉಡುಪಿಯ ಅನಿರುದ್ಧ ಸರಳತ್ತಾಯ ಸನ್ಯಾಸ ದೀಕ್ಷೆಯನ್ನು ಗುರುವಾರ ಹಿರಿಯಡ್ಕ ಸಮೀಪದಲ್ಲಿರುವ ಶೀರೂರು ಮೂಲ ಮಠದಲ್ಲಿ ಸ್ವೀಕರಿಸಿದರು.
ಇದರ ಅಂಗವಾಗಿ ಶಾಕಲ ಹೋಮ, ವಿರಜಾ ಹೋಮ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನಡೆದವು.
ನಂತರ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೂತನ ಯತಿಗೆ ಸನ್ಯಾಸ ದೀಕ್ಷೆಯ ಅಂಗವಾಗಿ ಕಲಶಾಭಿಷೇಕವನ್ನು ನೆರವೇರಿಸಿ ಪ್ರಣವ ಮಂತ್ರೋಪದೇಶವನ್ನು ನೀಡಿದರು.
ಶುಕ್ರವಾರ ಅನಿರುದ್ಧ ಸರಳತ್ತಾಯರಿಗೆ ಶೀರೂರು ಮಠಕ್ಕೆ ಕಳೆದ ವರ್ಷ ನಿಧನರಾದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನೆರವೇರಲಿದೆ. ಇದರೊಂದಿಗೆ ನೂತನ ಯತಿಗಳಿಗೆ ನಾಮಕರಣವೂ ನಾಳೆ ನಡೆಯಲಿದೆ.