ಉಡುಪಿ: ಕೋವಿಡ್‌ಗೆ ಮತ್ತೆ 6 ಬಲಿ; 892 ಮಂದಿಗೆ ಪಾಸಿಟಿವ್

Update: 2021-05-13 16:30 GMT

ಉಡುಪಿ, ಮೇ 13: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಗುರುವಾರ ಇನ್ನೂ ಆರು ಮಂದಿ ಬಲಿಯಾಗಿದ್ದಾರೆ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 251ಕ್ಕೇರಿದೆ. ದಿನದಲ್ಲಿ 892 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿಂದು 730 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 7108 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಗುರುವಾರ ವರದಿಯಾದ ಆರು ಮಂದಿ ಮೃತರಲ್ಲಿ ಇಬ್ಬರು ಪುರುಷರಾದರೆ (75 ಮತ್ತು 65), ಉಳಿದ ನಾಲ್ವರು (55, 38, 62, 51) ಮಹಿಳೆಯರು. ಇವರಲ್ಲಿ ಒಬ್ಬರು ಕುಂದಾಪುರ ತಾಲೂಕಿನವರಾದರೆ ಉಳಿದ ಐವರು ಉಡುಪಿ ತಾಲೂಕಿನವರು. ತಲಾ ಇಬ್ಬರು ಉಡುಪಿ ಮತ್ತು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗಳಲ್ಲಿ, ಒಬ್ಬರು ಮಣಿಪಾಲ ಹಾಗೂ ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಮೃತರಾದರು.

ಗುರುವಾರ ನಾಲ್ವರು ಹಾಗೂ ಬುಧವಾರ ಇಬ್ಬರು ಮೃತರಾಗಿದ್ದು, ಎಲ್ಲರೂ ಗ್ರಾಮೀಣ ಪ್ರದೇಶಗಳಿಂದ- ಕಟಪಾಡಿ, ಹೆಗ್ಗುಂಜೆ, ಹಾರಾಡಿ, ಹಂಗಳೂರು, ಪಡುಬಿದ್ರಿ- ಬಂದಿರುವುದು ವಿಶೇಷವಾಗಿದೆ. ಪ್ರತಿಯೊಬ್ಬರಲ್ಲೂ ಕೋವಿಡ್‌ನ ಗುಣಲಕ್ಷಣಗಳೊಂದಿಗೆ ತೀವ್ರ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾ ಕಾಣಿಸಿಕೊಂಡಿತ್ತು.

ಗುರುವಾರ ಪಾಸಿಟಿವ್ ಬಂದ 892 ಮಂದಿಯಲ್ಲಿ 453 ಮಂದಿ ಪುರುಷರು ಹಾಗೂ 439 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 222, ಕುಂದಾಪುರ ತಾಲೂಕಿನ 314 ಹಾಗೂ ಕಾರ್ಕಳ ತಾಲೂಕಿನ 349 ಮಂದಿ ಪಾಸಿಟಿವ್ ಬಂದಿದ್ದು, ಉಳಿದ ಏಳು ಮಂದಿ ಉತ್ತರ ಕನ್ನಡ-2, ದಕ್ಷಿಣ ಕನ್ನಡ-2, ಬೆಂಗಳೂರು ಹಾಗೂ ಹಾಸನ ಜಿಲ್ಲೆಗಳಿಂದ ಆಗಮಿಸಿದವರು.

ಬುಧವಾರ 730 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 36,269 ಕ್ಕೇರಿದೆ. ನಿನ್ನೆ ಜಿಲ್ಲೆಯ 2330 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 892 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 43,628 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,39,392 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News