ಆಮ್ಲಜನಕ ಬಿಕ್ಕಟ್ಟು: ಗೋವಾದ ಅತಿದೊಡ್ಡ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೇರಿಕೆ

Update: 2021-05-14 18:54 GMT

ಪಣಜಿ, ಮೇ 14: ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಶುಕ್ರವಾರ ಮತ್ತೆ 13 ಮಂದಿ ಪ್ರಾಣ ಕಳೆದುಕೊಳ್ಳುವುದರೊಂದಿಗೆ , ಮಂಗಳವಾರದಿಂದ ಇದುವರೆಗೆ  ದುರಂತದಲ್ಲಿ ಸಾವನ್ನಪ್ಪಿದವರ ಕೊರೋನ ರೋಗಿಗಳ  ಒಟ್ಟು ಸಂಖ್ಯೆ 74ಕ್ಕೇರಿದೆ ಎಂದು ವರದಿಯಾಗಿದೆ. 

ಮಂಗಳವಾರ 26 ,  ಬುಧವಾರ 20 , ಗುರುವಾರ 15 ಮತ್ತು ಶುಕ್ರವಾರ 13 ಕೊರೋನ ಸೋಂಕಿತರು ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 
ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇ 2ರಿಂದಲೂ ಆಮ್ಲಜನಕದ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ , ಗೋವಾಕ್ಕೆ ನಿಗದಿಯಾಗಿರುವ ಆಮ್ಲಜನಕವನ್ನು ಸಾಧ್ಯವಾದಷ್ಟು ಬೇಗ ಪೂರೈಸಬೇಕು ಎಂದು ಗೋವಾ ಹೈಕೋರ್ಟ್ ಕಳೆದ ವಾರ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಗೋವಾದಲ್ಲಿ ಸೋಂಕಿನ ಪ್ರಮಾಣ ಅತ್ಯಧಿಕವಾಗಿದೆ. 

ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಲಾಪದಲ್ಲಿ, ತನ್ನ ಸೂಚನೆಯ ಹೊರತಾಗಿಯೂ ಗೋವಾ ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗದ ಬಗ್ಗೆ ಗೋವಾ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ನ್ಯಾ. ನಿತಿನ್ ವಿ ಸಾಂಬ್ರೆ ಮತ್ತು ಎಂಎಸ್ ಸೋನಕ್ ಅವರಿದ್ದ ನ್ಯಾಯಪೀಠ ಅಸಮಾಧಾನ ಸೂಚಿಸಿದೆ. ಆಮ್ಲಜನಕದ ಕೊರತೆಯ ನಿವಾರಣೆಯ  ಬಗ್ಗೆ  ಮೇ 12ರಂದು ನಿರ್ದೇಶನ ನೀಡಿದ್ದರೂ ಸರಕಾರದ ಅಧೀನದಲ್ಲಿರುವ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವು ಸಾವಿನ ಪ್ರಕರಣ ಸಂಭವಿಸಿದ್ದು ವಿಷಾದನೀಯ ಎಂದು ನ್ಯಾಯಪೀಠ ಹೇಳಿದೆ. 

ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಗೋವಾ ಮುಖ್ಯಮಂತ್ರಿ  ಪ್ರಮೋದ್ ಸಾವಂತ್ ` ಆಮ್ಲಜನಕದ ಲಭ್ಯತೆ ಮತ್ತು ಅದರ ಪೂರೈಕೆಯ ನಡುವಿನ ಅಂತರದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಆದರೆ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ  ' ಎಂದಿದ್ದರು. ಗೋವಾದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದೆ.

ಈ ಮಧ್ಯೆ, ಗೋವಾ ರಾಜ್ಯಕ್ಕೆ ಆಮ್ಲಜನಕ ದಾಸ್ತಾನನ್ನು ಮರು ಭರ್ತಿಗೊಳಿಸುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ತಲೆದೋರಿರುವ ಕೊರತೆಯನ್ನು ನಿವಾರಿಸಲು ಈಗಿನಂತೆ ಪ್ರತೀ ದಿನ 11 ಮೆಟ್ರಿಕ್ ಟನ್ಗಳ ಬದಲು 22 ಮೆಟ್ರಿಕ್ ಟನ್ ಪೂರೈಸುವಂತೆ ಪತ್ರದಲ್ಲಿ ಕೋರಲಾಗಿದೆ. ಕಳೆದ 10 ದಿನದಲ್ಲಿ ನಿಗದಿಯಾಗಿದ್ದಕ್ಕಿಂತ  40 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆಯಾಗಿದೆ. ಮೇ 1ರಿಂದ 10ರ ಅವಧಿಯಲ್ಲಿ ನಿಗದಿಯಾಗಿದ್ದ 110 ಮೆಟ್ರಿಕ್ ಟನ್ ಬದಲು ಕೇವಲ 66.74 ಮೆಟ್ರಿಕ್ ಟನ್ ಮಾತ್ರ ಬಂದಿದೆ ಎಂದು ಸರಕಾರದ ಮೂಲಗಳು ಹೇಳಿವೆ. 

ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈಗ ರೋಗಿಗಳು ಭರ್ತಿಯಾಗಿರುವುದರಿಂದ ಹೊಸದಾಗಿ ರೋಗಿಗಳನ್ನು  ದಾಖಲಿಸಿಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ. ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆಯಿದ್ದು ನೆಲದಲ್ಲೇ ಮಲಗುವ ಪರಿಸ್ಥಿತಿಯಿದೆ. ಆಮ್ಲಜನಕ, ವೆಂಟಿಲೇಟರ್ನ ಕೊರತೆಯೂ ಇದೆಯಲ್ಲದೆ ಗಾಲಿ ಖುರ್ಚಿಯ ವ್ಯವಸ್ಥೆಗಾಗಿ 8 ಗಂಟೆ ಕಾಯುವ ಪರಿಸ್ಥಿತಿಯಿದೆ ಎಂದು ರೋಗಿಯೊಬ್ಬರನ್ನು ಉಲ್ಲೇಖಿಸಿ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಶುಕ್ರವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಗೋವಾದಲ್ಲಿ 2,491 ಹೊಸ ಸೋಂಕು ಪ್ರಕರಣದ ಜೊತೆಗೆ 62 ಸಾವು ಸಂಭವಿಸಿದೆ. ರಾಜ್ಯದಲ್ಲಿ ಸುಮಾರು 33,000 ಸಕ್ರಿಯ ಪ್ರªಕರಣಗಳಿವೆ ಎಂದು ಸರಕಾರದ ಮೂಲಗಳು ಹೇಳಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News