ಕೋವಿಡ್ ಬಾಧಿತರಿಗೆ ನೆರವಾದ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ರನ್ನು ಪ್ರಶ್ನಿಸಿದ ದಿಲ್ಲಿ ಪೊಲೀಸ್

Update: 2021-05-14 18:32 GMT

ಹೊಸದಿಲ್ಲಿ, ಮೇ 14: ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ಜನರಿಗೆ ನೆರವು ನೀಡಿದ ಕುರಿತು ದಿಲ್ಲಿ ಪೊಲೀಸ್ ನ ಕ್ರೈಮ್ ಬ್ರಾಂಚ್ ತನ್ನನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಶುಕ್ರವಾರ ಹೇಳಿದ್ದಾರೆ.

ಪೊಲಿಸರು ಶುಕ್ರವಾರ ಬೆಳಗ್ಗೆ ನನಗೆ ಕರೆ ಮಾಡಿದರು ಹಾಗೂ ಬೆಳಗ್ಗೆ 11.45ಕ್ಕೆ ನನ್ನ ಕಚೇರಿಗೆ ಆಗಮಿಸಿದರು. ಅಲ್ಲದೆ, ‘‘ನೀನು ಹೇಗೆ ಈ ಕೆಲಸಗಳನ್ನು ಮಾಡಿದೆ’’ ಎಂದು ಅವರು ಪ್ರಶ್ನಿಸಿದರು ಎಂದು ಅವರು ಹೇಳಿದ್ದಾರೆ. ಆದರೆ, ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ತಾವು ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಕೋವಿಡ್ ಔಷಧ ಹಾಗೂ ಇತರ ವಸ್ತುಗಳನ್ನು ವಿತರಣೆ ಮಾಡಿರುವುದರಲ್ಲಿ ಭಾಗಿಯಾದ ರಾಜಕಾರಣಿಗಳ ಕುರಿತು ತನಿಖೆ ನಡೆಸುವಂತೆ ಹಾಗೂ ಅಪರಾಧ ಪ್ರಕರಣವಾಗಿದ್ದರೆ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಉಚ್ಚ ನ್ಯಾಯಾಲಯ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉಚ್ಚ ನ್ಯಾಯಾಲಯದ ಆದೇಶ ಅನುಸರಣೆ ಹಿನ್ನೆಲೆಯಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ರೆಮ್ಡೆಸಿವಿರ್ ವಿತರಣೆ ಹಾಗೂ ಅದನ್ನು ಹೊಂದುವ ರಾಜಕಾರಣಿಗಳ ಉದ್ದೇಶ ಪರಿಶೀಲಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಮೇ 4ರಂದು ಪೊಲೀಸರಿಗೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News