ಕೋವಿಡ್ ಆದೇಶಕ್ಕೆ ಸೇರ್ಪಡೆ ಮತ್ತು ಬದಲಾವಣೆ
ಉಡುಪಿ, ಮೇ 14: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಹೊರಡಿಸಲಾದ ಸರಕಾರಿ ಆದೇಶದಲ್ಲಿ ಈ ಕೆಳಗಿನ ಸೇರ್ಪಡೆ ಮತ್ತು ಬದಲಾವಣೆ ಮಾಡಿ ಹೊಸ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರಕಾರದ ಈ ಕೆಳಗಿನ ಕಛೇರಿಗಳು ಹಾಗೂ ಸ್ವಾಯತ್ತ ಸಂಸ್ದೆಗಳು, ಕಾರ್ಪೋರೇಷನ್‌ಮತ್ತು ಇತರ ಸಂಸ್ದೆಗಳು (ಕಂಟೈನ್ಮೆಂಟ್ ವ್ಯಾಪ್ತಿ ಹೊರಗಡೆ) ಕಾರ್ಯನಿರ್ವಸಲು ಅನುಮತಿಸಲಾಗಿದೆ. ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ಬಂಧಿಖಾನೆ, ನಾಗರಿಕ ರಕ್ಷಣೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ, ಸಾರಿಗೆ, ಕಾರ್ಮಿಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು.
ಕೇಂದ್ರ ಸರಕಾರದ ಈ ಕೆಳಗಿನ ಕಛೇರಿಗಳು, ಇದರ ಸ್ವಾಯತ್ತ ಸಂಸ್ದೆಗಳು /ಅಧೀನ ಕಛೇರಿಗಳು ಹಾಗೂ ಸಾರ್ವಜನಿಕ ನಿಗಮಗಳು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ ಕಾರ್ಯಾಚರಿಸಬಹುದು. ರಕ್ಷಣೆ, ರಕ್ಷಣಾ ಘಟಕದ ಸಾರ್ವಜನಿಕ ಉದ್ಯಮಗಳು, ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆ ಮತ್ತು ದೂರ ಸಂಪರ್ಕ ಸೇವೆಗಳು.
ಬ್ಯಾಂಕುಗಳು, ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ದೆಗಳು, ಎನ್‌ಪಿಸಿಎಲ್, ಸಿಸಿಐಎಲ್‌ನಂತಹ ಸಂಸ್ದೆಗಳು, ಪಾವತಿ ವ್ಯವಸ್ಥೆ ನಿರ್ವಾಹಕರು ಮತ್ತು ಸ್ವತಂತ್ರ ಪ್ರಾಥಮಿಕ ವಿತರಕರು ಕನಿಷ್ಟ ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯಾಚರಿಸಬಹುದು. ಬ್ಯಾಂಕ್‌ಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಗಳು ಕರ್ತವ್ಯ ನಿರ್ವಹಿಸಲು ಅನುಮತಿಸಲಾಗಿದೆ.
ಈ ಕೆಳಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರೋಗಿಗಳು ಮತ್ತು ಅವರ ಪರಿಚಾರಕರಿಗೆ ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಅನುಮತಿ ಇದೆ. ಕೋವಿಡ್-19 ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಲಸಿಕೆ ಪಡೆಯಲು ಸಂದೇಶ ಬಂದವರು ಇದರ ಪುರಾವೆಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.
ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ವಿಕೋಪ ನಿರ್ವಹಣಾ ಕಾಯ್ದೆ 2005 ಹಾಗೂ ಕರ್ನಾಟಕ ಎಪಿಡಮಿಕ್ ಡೀಸಿಸ್ ಆ್ಯಕ್ಟ್ 2020 ಮತ್ತು ಐಪಿಸಿ ಸೆಕ್ಷನ್ 188 ಪ್ರಕಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶದಲ್ಲಿ ತಿಳಿಸಿದ್ದಾರೆ.