×
Ad

ಅರಬ್ಬಿ ಸಮುದ್ರದಲ್ಲಿ ತಲೆ ಎತ್ತಿದೆ ಪ್ರಬಲ ಚಂಡಮಾರುತ ‘ತೌಖ್ತೆ’

Update: 2021-05-14 19:30 IST

ಉಡುಪಿ, ಮೇ 14: ತೌಖ್ತೆ (TAUKTAE) ಮಧ್ಯ ಅರಬ್ಬಿಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ಚಂಡಮಾರುತದ ಹೆಸರು. ಶನಿವಾರ, ರವಿವಾರ, ಭಾರತದ ಪಶ್ಚಿಮ ಕರಾವಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು.

ಈ ಚಂಡಮಾರುತದ ಹೆಸರು ತೌಖ್ತೆ. ಅರೇ, ಚಂಡಮಾರುತ್ತಕ್ಕೆ ಇದೇನು ವಿಚಿತ್ರ ಹೆಸರು ಎನ್ನುತ್ತೀರಾ.. ನಮ್ಮ ಪಕ್ಕದ ಮ್ಯಾನ್ಮಾರ್ (ಬರ್ಮಾ) ರಾಷ್ಟ್ರ ಈ ಚಂಡಮಾರುತಕ್ಕೆ ಹೆಸರನ್ನು ಸೂಚಿಸಿದೆ. ತೌಖ್ತೆ ಎಂದರೆ ಲಿಸಾರ್ಡ್ (ಒಂದು ಜಾತಿಯ ಹಲ್ಲಿ).

ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತ ಗಳಿಗೆ ಇವುಗಳ ಸುತ್ತ ಇರುವ 13 ರಾಷ್ಟ್ರಗಳು ನಾಮಕರಣ ಮಾಡುತ್ತವೆ. ಈ ಹೆಸರುಗಳನ್ನು ಮೊದಲೇ ಸೂಚಿಸಲಾಗಿರುತ್ತವೆ. ಕಳೆದ ವರ್ಷ, ಪ್ರತೀ ರಾಷ್ಟ್ರ 13 ಹೆಸರುಗಳ ಪಟ್ಟಿಕೊಟ್ಟದ್ದರಿಂದ ಒಟ್ಟು 169 ಹೊಸ ಹೆಸರುಗಳ ಪಟ್ಟಿಯನ್ನು ಇಂಡಿಯನ್ ಮೆಟ್ರೋಲೋಜಿಕಲ್ ವಿಭಾಗ ಬಿಡುಗಡೆ ಮಾಡಿದೆ.

ಈ ಹೊಸ ಪಟ್ಟಿಯಲ್ಲಿ ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮನ್, ಪಾಕಿಸ್ತಾನ, ಕತರ್, ಸೌದಿ, ಶ್ರೀಲಂಕಾ, ಥಾಯ್ಲೆಂಡ್, ಯುಎಇ ಮತ್ತು ಯೆಮೆನ್ ಹೀಗೆ 13 ರಾಷ್ಟ್ರಗಳ ಹೆಸರು ಕ್ರಮವಾಗಿ ಬರುತ್ತವೆ. ತೌಖ್ತೆ ಮ್ಯಾನ್ಮಾರ್ ದೇಶ ಕೊಟ್ಟ ಹೆಸರು. ಮುಂದೆ ಬರುವ ಚಂಡಮಾರುತದ ಹೆಸರು ಯಾಸ್. ಇದನ್ನು ಒಮನ್ ದೇಶ ಸೂಚಿಸಿದೆ.

ಈ ತೌಖ್ತೆ ಚಂಡಮಾರುತ ಈಗ ತಾನೆ ಮಧ್ಯ ಅರಬ್ಬಿಸಮುದ್ರದಲ್ಲಿ ಭಾರತದ ನೈರುತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಅಂದರೆ ನಮ್ಮ ಪಶ್ಚಿಮದ ಕರಾವಳಿ ಕಡೆಗೆ ಬರುತ್ತಿದೆ. ಹವಾಮಾನ ವಿಶ್ಲೇಷಕರ ಪ್ರಕಾರ 15 ಹಾಗೂ 16 ರಂದು ಪಶ್ಚಿಮದಿಂದ ಉತ್ತರಕ್ಕೆ ಹೊರಟು ಗುಜರಾತ್‌ನ ದಕ್ಷಿಣ ತೀರಕ್ಕೆ 17 ರಂದು ತಲುಪಲಿದೆ.

ಚಂಡಮಾರುತವೆಂದರೆ ಸಮುದ್ರದಲ್ಲಿ ಒಂದು ಕಡೆ ನಿಮ್ನ ಒತ್ತಡ ಸೃಷ್ಟಿ ಯಾಗಿ ಸುತ್ತಲಿಂದಲೂ ಅಲ್ಲಿಗೆ ಗಾಳಿ ನುಗ್ಗುವುದು. ಅವು ನೇರ ನುಗ್ಗದೇ ಸುರುಳಿ ಆಕಾರದಲ್ಲಿ ಸುತ್ತುತ್ತಾ ಮೋಡಗಳನ್ನು ಎತ್ತಿಕೊಂಡು ಕೆಲವೇ ಗಂಟೆಗಳಲ್ಲಿ ಅತೀ ಪ್ರಬಲ ಶಕ್ತಿ ಪಡೆಯುತ್ತವೆ. ಧಾರಾಕಾರ ಮಳೆ ಬಿರುಗಾಳಿಯೊಂದಿಗೆ ಸಮುದ್ರ ತೀರಕ್ಕೆ ಅಪ್ಪಳಿಸಿ ಬೀಸಿ ಕೆಲವೇ ಗಂಟೆಗಳಲ್ಲಿ ಅನೇಕ ಅವಾಂತರಗಳನ್ನು ಮಾಡುತ್ತವೆ.

ಭಾರತದ ಪೂರ್ವ ಕರಾವಳಿಯಲ್ಲಿ, ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತ ಪ್ರತೀ ವರ್ಷವಿರುತ್ತದೆ. ಅದು ಅಪರೂಪವೇನಲ್ಲ. ಆದರೆ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತ ಅತೀ ಅಪರೂಪ. ಬಹುಶಃ ಸಮುದ್ರ ತೀರಕ್ಕೆ ಗೋಡೆಯಂತಿರುವ ಸಸ್ಯ ಶ್ಯಾಮಲೆಯಾಗಿದ್ದ ನಮ್ಮ ಪಶ್ಚಿಮಘಟ್ಟವೇ ಇದಕ್ಕೆ ಕಾರಣವಿದ್ದಿರಬೇಕು.

ಆದರೆ ಈಗ ಕಾಡು ಬೋಳಾಗಿರುವುದರಿಂದ ಭೂಮಿಯ ಉಷ್ಣತೆ ಸುಮಾರು 1.5 ಡಿಗ್ರಿಯಷ್ಟು ಏರಿರುವುದರಿಂದ ಅರಬೀ ಸಮುದ್ರದಲ್ಲೂ ಚಂಡಮಾರುತ, ಭಾರತದ ಪೂರ್ವ ಕರಾವಳಿಯಲ್ಲಿ ಪ್ರತೀ ವರ್ಷ ಬರುವಂತೆ ಮಾಮೂಲಾಗಿ ಬರುತ್ತಿದೆ. ಪ್ರಕೃತಿ ಮುನಿದರೆ...... ಹೀಗೆಯೇ. ಅನುಭವಿಸಬೇಕಷ್ಟೆ.

-ಡಾ.ಎ.ಪಿ.ಭಟ್, ನಿವೃತ್ತ ಪ್ರಾಂಶುಪಾಲ, ಭೌತಶಾಸ್ತ್ರ ಪ್ರಾಧ್ಯಾಪಕ, ಪೂರ್ಣಪ್ರಜ್ಞ ಕಾಲೇಜು ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News