ಕಲ್ಲಡ್ಕ ; ಕೋವಿಡ್ ಕರ್ತವ್ಯದಲ್ಲಿದ್ದ ಎಎಸ್ಸೈಗೆ ಬಿಜೆಪಿ ಮುಖಂಡನಿಂದ ಹಲ್ಲೆ : ಆರೋಪ

Update: 2021-05-14 14:49 GMT

ಬಂಟ್ವಾಳ, ಮೇ 14: ಕಲ್ಲಡ್ಕದಲ್ಲಿ ಇಂದು ಬೆಳಗ್ಗೆ ಇಲ್ಲಿನ ಬಿಜೆಪಿ ಮುಖಂಡ, ತಾಲೂಕು ಪಂಚಾಯತ್ ಸದಸ್ಯ ಮತ್ತು ಎಎಸ್ಸೈ ನಡುವೆ ನಡೆದ ಹಲ್ಲೆ ಹಾಗೂ ವಾಗ್ವಾದಕ್ಕೆ ಸಂಬಂಧಿಸಿ ಇಬ್ಬರೂ ನೀಡಿದ ದೂರು ಪ್ರತಿದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ ಕಲ್ಲಡ್ಕ ಪೇಟೆಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಅಂಗಡಿಗಳನ್ನು ಮುಚ್ಚಿಸುವ ವಿಚಾರವಾಗಿ ತಾಲೂಕು ಪಂಚಾಯತ್ ಬಿಜೆಪಿ ಸದಸ್ಯ ಮಹಾಬಲ ಆಳ್ವ ಮತ್ತು ನಗರ ಠಾಣೆಯ ಎಎಸ್ಸೈ ಕುಂಞ ಓ ಅವರ ನಡುವೆ ಹಲ್ಲೆ ಹಾಗೂ ವಾಗ್ವಾದ ನಡೆದಿದೆ ಎನ್ನಲಾಗಿದೆ. 

ಘಟನೆಯ ವೇಳೆ ನಡೆದ ಮಾತಿನ ಚಕಮಕಿಯ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಪರ - ವಿರೋಧದ ಮಾತುಗಳು ಕೇಳಿ ಬಂದಿವೆ. ಕೋವಿಡ್ ನಿಯಂತ್ರಣ ಕರ್ತವ್ಯದಲ್ಲಿ ಇದ್ದ ಎಎಸ್ಸೈ ಕುಂಞ ಓ. ಅವರ ಕಪಾಲಕ್ಕೆ ಬಿಜೆಪಿ ಮುಖಂಡನಾದ ತಾ.ಪಂ. ಸದಸ್ಯ ಮಹಾಬಲ ಆಳ್ವ ಕೈಯಿಂದ ಹೊಡೆದಿದ್ದಾರೆ‌ ಎಂದು ಕೆಲವು ಪ್ರತ್ಯಕ್ಷ ದರ್ಶಿಗಳು ದೂರಿದ್ದಾರೆ. ಕೊನೆಗೆ ಮಹಾಬಲ ಆಳ್ವ ಮತ್ತು ಎಎಸ್ಸೈ ಕುಂಞ ಓ. ನೀಡಿದ ದೂರಿನಂತೆ ಎರಡು ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅದೇಶದಂತೆ ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳನ್ನು ಬೆಳಗ್ಗೆ 6 ಗಂಟೆಯಿಂದ 9 ಗಂಟೆಯ ವರೆಗೆ ಮಾತ್ರ ತೆರೆಯಲು ಅವಕಾಶ ಇದೆ. ಈ ಬಗ್ಗೆ ನಮಗೆ ತಾಲೂಕು ಆಡಳಿತ ಸೂಚನೆ ನೀಡಿದ್ದು, ಅದರಂತೆ ಕಲ್ಲಡ್ಕದಲ್ಲಿ ಕರ್ತವ್ಯದಲ್ಲಿ ಇದ್ದ ನಾನು 9 ಗಂಟೆಯ ಬಳಿಕವೂ ಅಂಗಡಿಗಳ ಬಾಗಿಲಿನಿಂದ ತೆರಳದವರಿಗೆ ಮನೆಗೆ ತೆರಳುವಂತೆ ಸೂಚನೆ ನೀಡುತ್ತಾ ಬರುತ್ತಿದ್ದೆ. ಈ ವೇಳೆ ತಾಲೂಕು ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಮಹಾಬಲ ಆಳ್ವ ಅವರು ಪ್ರತಿರೋಧ ವ್ಯಕ್ತಪಡಿಸಿ ತನಗೆ ಕೈಯಿಂದ ಹಲ್ಲೆ ನಡೆಸಿ ಜನರನ್ನು ಗುಂಪು ಸೇರಿಸಿ ವಾಗ್ವಾದಕ್ಕೆ ಇಳಿದಿದ್ದಾರೆ. ಅವರು ಕೊರೋನ ನಿಯಮ ಉಲ್ಲಂಘನೆ ಮಾಡಿದ್ದಲ್ಲದೆ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಎಎಸ್ಸೈ ಕುಂಞ ಓ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ ಕಲ್ಲಡ್ಕದ ಪಂಚವಟಿ ಸಂಕೀರ್ಣದಲ್ಲಿರುವ ಮೆಡಿಕಲ್ ನಲ್ಲಿ ಔಷಧ ಕೊಳ್ಳುವುದಕ್ಕೆ ಬಂದಾಗ ನಗರ ಠಾಣೆಯ ಎಎಸ್ಸೈ ಕುಂಞ ಓ. ಅವರು ತನ್ನ ವಾಹನಕ್ಕೆ ಹೊಡೆಯುವ ಜತೆಗೆ ಲಾಠಿಯಿಂದ ನನಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿ ಮಹಾಬಲ ಆಳ್ವ ನೀಡಿದ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಮಹಾಬಲ ಆಳ್ವ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊರ ರೋಗಿಯಾಗಿ ದಾಖಲಾಗಿದ್ದರು.

ಎರಡೂ ದೂರುಗಳ ಕುರಿತು ಪ್ರಕರಣ ದಾಖಲಾಗಿದ್ದು ಘಟನೆಯ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News