×
Ad

ಉಡುಪಿ: ಮೇ 15ರಂದು ನಗರದ 5 ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯ

Update: 2021-05-14 21:14 IST

ಉಡುಪಿ, ಮೇ 14: ಉಡುಪಿ ನಗರ ಪ್ರದೇಶದಲ್ಲಿ ಮಾ.25 ಹಾಗೂ ಅದಕ್ಕಿಂತ ಮೊದಲು ಒಂದನೇ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದ ಫಲಾನುಭವಿಗಳಿಗೆ ಶನಿವಾರ ನಗರದ ಐದು ಕೇಂದ್ರಗಳಲ್ಲಿ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುವುದು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (200ಡೋಸ್), ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (200ಡೋಸ್), ಸೈಂಟ್ ಸಿಸಿಲೀಸ್ ಶಾಲೆ ಜಿಲ್ಲಾಸ್ಪತ್ರೆ ಎದುರು ಉಡುಪಿ (250 ಡೋಸ್), ಎಫ್‌ಸಿಎಐ ಕುಕ್ಕಿಕಟ್ಟೆ (98 ಡೋಸ್) ಹಾಗೂ ಸರಕಾರಿ ಮಕ್ಕಳ ಆಸ್ಪತ್ರೆ ಉಡುಪಿ (200 ಡೋಸ್) ಇಲ್ಲಿ ಮಾ.15ರಂದು ಲಸಿಕೆಯನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ.

ಈ ಎಲ್ಲಾ ಫಲಾನುಭವಿಗಳಿಗೆ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುವುದು ಹಾಗೂ ಎಸ್‌ಎಂಎಸ್ ಸಂದೇಶ ಹೊಂದಿರುವ ಫಲಾನುಭವಿಗಳು ಸಂದೇಶದಲ್ಲಿ ನಿಗದಿ ಪಡಿಸಿದ ಲಸಿಕಾ ಕೇಂದ್ರಕ್ಕೆ ಆಧಾರ್ ಕಾರ್ಡ್‌ನೊಂದಿಗೆ ತೆರಳಿ ಲಸಿಕೆ ಪಡೆಯುವಂತೆ ಕೋರಲಾಗಿದೆ.

ಅಕಸ್ಮಿಕವಾಗಿ ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದವರಿಗೆ ತಪ್ಪಾಗಿ ಎಸ್‌ಎಂಎಸ್ ಬಂದಿದ್ದಲ್ಲಿ, ಆ ಎಸ್‌ಎಂಎಸ್‌ನ್ನು ಕಡೆಗಣಿಸಿ ಲಸಿಕಾ ಕೇಂದ್ರಕ್ಕೆ ಬಾರದೇ, ಕೋವಿಶೀಲ್ಡ್ ಎರಡನೇ ಡೋಸ್ ಪಡೆಯಲು ಮೇ 17ರಂದು ಸಂಬಂಧಿತ ಲಸಿಕಾ ಕೇಂದ್ರಕ್ಕೆ ಆಗಮಿಸುವಂತೆ ಸೂಚಿಸಲಾಗಿದೆ.

ಗ್ರಾಮೀಣ ಪ್ರದೇಶಗಳ ಸರಕಾರಿ ಆಸ್ಪತ್ರೆಗಳಲ್ಲಿ ಮಾ.25 ಅಥವಾ ಮೊದಲು ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಲಸಿಕೆಯನ್ನು ಮೇ 15ರಂದು ನೀಡಲಾಗುವುದು. ಅರ್ಹ ಫಲಾನುಭವಿಗಳು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಖಚಿತಪಡಿಸಿ ಕೊಂಡು ಲಸಿಕಾ ಕೇಂದ್ರಕ್ಕೆ ತೆರಳಬಹುದು.

ನಗರ ಪ್ರದೇಶದಲ್ಲಿ ಮಾ.25ಕ್ಕಿಂತ ಅಥವಾ ಅದಕ್ಕೂ ಮೊದಲು ಕೋವ್ಯಾಕ್ಸಿನ್ ಲಸಿಕೆ ಪಡೆದವರು 2ನೇ ಡೋಸ್ ಪಡೆಯಲು ಎಸ್‌ಎಂಎಸ್ ಕಳುಹಿಸಲಾಗುವುದು. ಎಸ್‌ಎಂಎಸ್ ಬಂದವರು ಅದರಲ್ಲಿ ತಿಳಿಸಿರುವ ಆಸ್ಪತ್ರೆಗೆ ಬಂದು ಲಸಿಕೆಯನ್ನು ಪಡೆಯಬಹುದು.

ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಗಳಲ್ಲಿ ಫೆ. 19 ಅಥವಾ ಅದಕ್ಕಿಂತ ಮೊದಲು ಕೋವಿಶೀಲ್ಡ್ ಲಸಿಕೆ ಪಡೆದವರು 2ನೇ ಡೋಸ್‌ನ್ನು ಮೇ 15ರಂದು ಪಡೆಯಬಹುದು. ಅರ್ಹ ಫಲಾನುಭವಿಗಳು ಆಕಾಶ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬರಬಹುದು.

ನಗರ ಪ್ರದೇಶದಲ್ಲಿ ಫೆ. 19ಕ್ಕೆ ಮೊದಲು ಕೋವಿಶೀಲ್ಡ್ ಲಸಿಕೆ ಪಡೆದವರು 2ನೇ ಡೋಸ್ ಲಸಿಕೆ ಪಡೆಯಲು ಎಸ್‌ಎಂಎಸ್ ಕಳುಹಿಸಲಾಗು ವುದು. ಎಸ್‌ಎಂಎಸ್ ಬಂದವರು ಅದರಲ್ಲಿ ತಿಳಿಸಿದ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಬಹುದು ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

18-44 ವರ್ಷದವರಿಗೆ ಲಸಿಕೆ ಸ್ಥಗಿತ:   ಜಿಲ್ಲೆಯಲ್ಲಿ ಮುಂದಿನ ಆದೇಶದವರೆಗೆ 18-44 ವಯೋಮಿತಿಯವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ವನ್ನು ಸರಕಾರದ ಆದೇಶದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೇ 17ರವರೆಗೆ ಲಸಿಕೆ ಪಡೆದುಕೊಳ್ಳಲು ಈಗಾಗಲೇ ಲಸಿಕೆ ಶೆಡ್ಯೂಲ್ ನಿಗದಿ ಪಡಿಸಿಕೊಂಡಿರುವವರಿಗೆ ಸಹ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮುಂದಿನ ಸೂಚನೆ ನೀಡುವವರೆಗೆ ಲಸಿಕಾ ಕೇಂದ್ರಕ್ಕೆ ಬಾರದಂತೆ ತಿಳಿಸಲಾಗಿದೆ.

ಅದೇ ರೀತಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಪ್ರಥಮ ಡೋಸ್ ನೀಡುವುದನ್ನು ಸಹ ಸರಕಾರದ ಆದೇಶದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದೆ ಲಸಿಕೆ ಲಭ್ಯತೆ ಹಾಗೂ ದಿನಾಂಕದ ಕುರಿತು ಪತ್ರಿಕಾ ಪ್ರಕಟಣೆ ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News