ಬೇಡಿಕೆಗಳ ಈಡೇರಿಕೆಗಾಗಿ ಕಟ್ಟಡ ಕಾರ್ಮಿಕರಿಂದ ತಮ್ಮ ಮನೆಗಳ ಎದುರು ಮೌನ ಪ್ರತಿಭಟನೆ
ಉಡುಪಿ, ಮೇ 14: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಶನ್ (ಸಿಐಟಿಯು) ಜಂಟಿ ಆಶ್ರಯದಲ್ಲಿ ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 15ರಂದು ರಾಜ್ಯದ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ತಮ್ಮ ಮನೆಗಳ ಎದುರು ತಮ್ಮ ಕುಟುಂಬದ ಸದಸ್ಯರ ಜೊತೆ ಶಾಂತಿಯುತ ಮೌನ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡನೇ ಕೋವಿಡ್ ಅಲೆಗೆ ಸಿಲುಕಿ ನಿರುದ್ಯೋಗಿಗಳಾಗಿರುವ ರಾಜ್ಯದ ನೊಂದಾಯಿತ, ವಲಸೆ ಕಾರ್ಮಿಕರ, ಕಟ್ಟಡ ಕಾರ್ಮಿಕರ ಕುಟುಂಬ ಗಳಿಗೆ ಹಣಕಾಸಿನ ನೆರವನ್ನು ಒದಗಿಸುವಂತೆ ಒತ್ತಾಯಿಸಿ ಈಗಾಗಲೇ ಮನವಿ ಸಲ್ಲಿಸಿದ್ದರೂ, ಇದುವರೆಗೆ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಸರಕಾರದ ನೀತಿಯನ್ನು ವಿರೋಧಿಸಿ ಈ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ರಾಜ್ಯ ಕಟ್ಟಡ ಕಾಮಿರ್1ಕ ಸಂಘಗಳ ಸಮನ್ವಯ ಸಮಿತಿಯ ತುರ್ತು ಆನ್‌ಲೈನ್ ಸಭೆ ಐಎನ್‌ಟಿಯುಸಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಶಾಮಣ್ಣ ರೆಡ್ಡಿ ಅದ್ಯಕ್ಷತೆಯಲ್ಲಿ ನಡೆದಿದ್ದು, ತಮ್ಮ ಬೇಡಿಕೆಗಳ ಕುರಿತು ರಾಜ್ಯ ಸರಕಾರ ಮತ್ತು ಮಂಡಳಿ ಯಾವುದೇ ಕ್ರಮ ತೆಗೆದು ಕೊಳ್ಳದಿರುವುದನ್ನು ಹಾಗೂ ಮೇ 4ರಿಂದ ಘೋಷಿಸಲಾದ ಲಾಕ್‌ಡೌನ್‌ನಿಂದ ಕಾರ್ಮಿಕರ ಬದುಕಿನ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಮಂಡಳಿ ಇದುವರೆಗೆ ಯಾವುದೇ ನೆರವಿನ ಕಾರ್ಯಕ್ರಮ ಹಾಕಿಕೊಳ್ಳದಿರುವುದನ್ನು ಖಂಡಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ನಮ್ಮ ಪ್ರಮುಖ ಬೇಡಿಕೆಗಳ ಬಗ್ಗೆ ಕ್ರಮವಹಿಸಲು ಆಗ್ರಹಿಸಿ ಮೇ 15ರಂದು ಸಾವಿರಾರು ಕಟ್ಟಡ ಕಾರ್ಮಿಕರು ತಮ್ಮ ತಮ್ಮ ಮನೆಗಳ ಮುಂಭಾಗದಲ್ಲಿ ಕುಟುಂಬ ಸದಸ್ಯರೊಂದಿಗೆ ದೈಹಿಕ ಅಂತರದೊಂದಿಗೆ ಘೋಷಣೆಗಳ ಫಲಕಗಳನ್ನು ಹಿಡಿದುಕೊಂಡು ಶಾಂತಿಯುತ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.