×
Ad

ಮಂಗಳೂರು: ‘ಪೊಲೀಸ್ ಕೋವಿಡ್ ಕೇರ್ ಸೆಂಟರ್’ಗೆ ಚಾಲನೆ

Update: 2021-05-14 22:18 IST

ಮಂಗಳೂರು, ಮೇ 14: ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ ಕಟ್ಟಡದಲ್ಲಿ ಆರಂಭಗೊಂಡ ‘ಪೊಲೀಸ್ ಕೋವಿಡ್ ಕೇರ್ ಸೆಂಟರ್’ಗೆ ಚಾಲನೆ ನೀಡಲಾಗಿದೆ.

ಈ ಸೆಂಟರ್‌ನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪೊಲೀಸರು ಸಹಿತ ಕೊರೋನ ಫ್ರಂಟ್‌ಲೈನ್ ವಾರಿಯರ್ಸ್‌ ಜತೆ ಜಿಲ್ಲಾಡಳಿತ ಸಹಿತ ಸರಕಾರ ಸದಾ ಇರುತ್ತದೆ ಎಂದರು.

ಪೊಲೀಸರು ಪ್ರತೀ ಕ್ಷಣವು ವಿಷಮ ಪರಿಸ್ಥಿತಿಯಲ್ಲೂ ರಾತ್ರಿ ಹಗಲು ಎನ್ನದೆ ಜನರ ಸುರಕ್ಷತೆಗಾಗಿ ಕೆಲಸ ಮಾಡುತ್ತಾರೆ. ಕೊರೋನ ಸಂದರ್ಭ ಕೂಡ ಪೊಲೀಸರ ಸೇವೆ ಮಹತ್ವದ್ದಾಗಿದೆ. ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು, ಸಿಬಂದಿ, ಚಾಲಕರಿಗೆ ಪ್ರತ್ಯೇಕವಾದ ಕೋವಿಡ್ ಸೆಂಟರ್‌ನ್ನು ಈಗಾಗಲೇ ಆರಂಭಿಸಲಾಗಿದೆ. ಅದೇ ರೀತಿಯಲ್ಲಿ ಪೊಲೀಸರಿಗೂ ‘ಪೊಲೀಸ್ ಕೋವಿಡ್ ಕೇರ್‌ಸೆಂಟರ್’ ಆರಂಭಿಸ ಲಾಗಿದೆ ಎಂದು ಡಾ. ರಾಜೇಂದ್ರ ತಿಳಿಸಿದರು.

ಈ ಕೋವಿಡ್ ಕೇರ್ ಸೆಂಟರ್‌ಗೆ ಬೇಕಾಗುವ ವೈದ್ಯರು, ಸಿಬ್ಬಂದಿ ವರ್ಗವನ್ನು ನೀಡಲಾಗುವುದು. ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯ ಬೇಕಾದರೂ ಒದಗಿಸಿಕೊಡಲು ಜಿಲ್ಲಾಡಳಿತ ಬದ್ಧವಿದೆ. ಕೋವಿಡ್ ಕೇರ್ ಸೆಂಟರ್‌ಗೆ ಕಟ್ಟಡ ಹಾಗೂ ಇತರ ಸೌಕರ್ಯ ಒದಗಿಸಿಕೊಟ್ಟಿರುವ ಕಾಲೇಜಿನ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಭಿನಂದನಾರ್ಹರು. ಪೊಲೀಸರ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಆಯುಕ್ತರು ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ನುಡಿದರು.

ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ಅಲೋಶಿಯಸ್ ಕಾಲೇಜಿನ ಸುವ್ಯವಸ್ಥಿತ ಕಟ್ಟಡದಲ್ಲಿದ್ದು, ಇತರೆ ಕಟ್ಟಡಗಳಿಂದ ಪ್ರತ್ಯೇಕವಾಗಿದೆ. ಇಲ್ಲಿ ಉತ್ತಮ ವಾತಾವರಣವಿದೆ. ಸದ್ಯ 20 ಬೆಡ್‌ಗಳಿದ್ದು ಡೈನಿಂಗ್ ಹಾಲ್, ರಿಕ್ರಿಯೇಷನ್ ರೂಮ್ ಕೂಡ ಇದೆ. ಊಟ, ಉಪಹಾರ, ಬಿಸಿ ನೀರು ಮೊದಲಾದ ವ್ಯವಸ್ಥೆಯೂ ಇರುತ್ತದೆ. ಯಾವುದೇ ಹಿಂಜರಿಕೆ ಇಲ್ಲದೆ ಕೋವಿಡ್ ಸೋಂಕಿತ ಪೊಲೀಸರು ಹಾಗೂ ಅವರ ಕುಟುಂಬದವರು ಇಲ್ಲಿ ಬಂದು ಉಳಿದುಕೊಳ್ಳಬಹುದು. ಮನೆಯಲ್ಲಿ ಐಸೊಲೇಷನ್‌ನಲ್ಲಿ ರುವುದು ಅಸಾಧ್ಯವಾದವರಿಗೆ ವ್ಯವಸ್ಥೆ ಮಾಡಿಕೊಡುವ ಉದ್ದೇಶದಿಂದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಈ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ವಂ.ಪ್ರವೀಣ್ ಮಾರ್ಟಿಸ್, ಐಟಿಐ ನಿರ್ದೇಶಕ ವಂ.ಸಿರಿಲ್ ಡಿಮೆಲ್ಲೊ, ಎಸ್‌ಎಸಿಎಎ ಅಧ್ಯಕ್ಷ ಸ್ಟೀವನ್ ಪಿಂಟೊ, ಪಿಯು ಕಾಲೇಜಿನ ಪ್ರಾಂಶುಪಾಲ ವಂ. ಕ್ಲಿಫರ್ಡ್ ಸಿಕ್ವೇರಾ, ಪರೀಕ್ಷಾಂಗ ಕುಲಸಚಿವ ಅಲ್ವಿನ್ ಡೇಸಾ ಉಪಸ್ಥಿತರಿದ್ದರು.

ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 1,700 ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿ 330 ಪೊಲೀಸರು ಕೊರೋನ ಸೋಂಕಿತರಾಗಿದ್ದರು. ಈ ಬಾರಿ 62 ಮಂದಿ ಸೋಂಕಿತರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಅವರ ಕುಟುಂಬಿಕರ ಸುರಕ್ಷತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಪೊಲೀಸ್ ಕೋವಿಡ್ ಕೇರ್ ಆರಂಭಿಸಲಾಗಿದೆ.
-ಎನ್.ಶಶಿಕುಮಾರ್
ಪೊಲೀಸ್ ಆಯುಕ್ತರು, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News