ಮೇ 15: ಕಟ್ಟಡ ಕಾರ್ಮಿಕರಿಂದ ಮನೆ-ಮನೆ ಪ್ರತಿಭಟನೆ
ಮಂಗಳೂರು, ಮೇ 14: ಕೊರೋನ ಲಾಕ್‌ಡೌನ್‌ನಲ್ಲಿ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಸರಕಾರದಿಂದ ಯಾವುದೇ ಸಕಾರಾತ್ಮಕ ಆರ್ಥಿಕ ಪರಿಹಾರ ಅಥವಾ ಆಹಾರಧಾನ್ಯ ಸಿಗಲಿಲ್ಲ. ಇದರಿಂದ ಜನ ಹಸಿವಿನಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾರ್ಮಿಕರಿಗೆ ಓಡಾಟ ಮಾಡಲು ವಾಹನದ ವ್ಯವಸ್ಥೆಯೂ ಇಲ್ಲದ್ದರಿಂದ ದುಡಿಯಲು ಕೆಲಸವಿಲ್ಲದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಮತ್ತು ಇತರೆ ಕೇಂದ್ರ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿಯು ಜಂಟಿಯಾಗಿ ಮೇ 15ರಂದು ರಾಜ್ಯಾದ್ಯಂತ ಕಾರ್ಮಿಕರು ತಮ್ಮ ಮನೆಗಳಲ್ಲೇ ಪ್ರತಿಭಟನೆ ನಡೆಸಲು ಕರೆ ನೀಡಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಮೊದಲ ಅಲೆಯ ಲಾಕ್‌ಡೌನ್ ಪರಿಹಾರ ಸಿಗದ 1 ಲಕ್ಷ ಕಾರ್ಮಿಕರಿಗೆ ಕೂಡಲೇ ಪರಿಹಾರದ ಬಾಕಿ ಹಣ ಪಾವತಿ ಮಾಡಬೇಕು. ನೋಂದಾಯಿತ/ನೋಂದಾಯಿತರಲ್ಲದ ಕಟ್ಟಡ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ.ನಂತೆ ಕನಿಷ್ಟ ಮೂರು ತಿಂಗಳು ಲಾಕ್‌ಡೌನ್ ಪರಿಹಾರ ನೀಡಬೇಕು. ಕೋವಿಡ್‌ನಿಂದ ಮೃತರಾದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂ.ಹಾಗೂ ನೋಂದಾಯಿತರಲ್ಲದ ಕಟ್ಟಡ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಬೇಕು. ಕೊರೋನ ಪೀಡಿತ ಕಟ್ಟಡ ಕಾರ್ಮಿಕರಿಗೆ ಮತ್ತವರ ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.