ಭಟ್ಕಳ : ಇಂದಿರಾ ಕ್ಯಾಂಟಿನ್‍ನಲ್ಲಿ ಆಹಾರ ವಿತರಣೆ ಆರಂಭ

Update: 2021-05-14 17:27 GMT

ಭಟ್ಕಳ : ಹಸಿವು ನೀಗಿಸಲು ಅನುಕೂಲವಾಗುವ ಉದ್ದೇಶದಿಂದ ಸರಕಾರ ಜಾರಿಗೆ ತಂದ ಆದೇಶದ ಪ್ರಕಾರ  ಇಲ್ಲಿನ ಇಂದಿರಾ ಕ್ಯಾಂಟೀನ್‍ನಲ್ಲಿ ತಿಂಡಿ, ಊಟವನ್ನು  ಉಚಿತವಾಗಿ ವಿತರಿಸಲು ಆರಂಭಿಸಲಾಗಿದೆ.

ಇಂದಿರಾ ಕ್ಯಾಂಟೀನ್‍ನ ಮೂಲಕ ಲಾಕಡೌನ್‍ನಂತಹ ಸಂಕಷ್ಟಮಯ ಸಮಯದಲ್ಲಿ ಮೂರೂ ಹೊತ್ತು  ಉಚಿತ ಆಹಾರ ವಿತರಿಸುತ್ತಿರುವುದು ಬಡವರಿಗೆ, ನಿರ್ಗಗತಿಕರಿಗೆ, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲರಿಗೂ  ಅನುಕೂಲವಾಗಿದೆ.

ಭಟ್ಕಳದಲ್ಲಿ ಕಳೆದ ಆರು ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್ ತನ್ನ ಗುಣಮಟ್ಟದ ಆಹಾರ ಮತ್ತು ಶುಚಿತ್ವದಿಂದಾಗಿ ಎಲ್ಲರ ಗಮನ ಸೆಳೆದಿತ್ತು. ಇಲ್ಲಿ ದಿನಂಪ್ರತಿ  ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಚಾಲಕರು, ಆಸ್ಪತ್ರೆಗೆ ಬಂದವರು, ಕಾರ್ಯದ ನಿಮಿತ್ತ ಪೇಟೆಗೆ ಬಂದವರು ಹೀಗೆ ಎಲ್ಲರಿಗೂ ಮಧ್ಯಾಹ್ನದ ಹೊತ್ತು ಕಡಿಮೆ ದರದಲ್ಲಿ ಊಟ ಮಾಡಲು ಅನುಕೂಲವಾಗಿತ್ತು. ಇತ್ತೀಚೆಗೆ ಕೊರೋನ ಸೋಂಕು ಮಿತಿಮೀರಿದ  ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂ  , ವಾರಾಂತ್ಯದ ಕರ್ಫ್ಯೂ, ಲಾಕ್ ಡೌನ್  ಆದರೂ ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರ ಪೂರೈಕೆ ಸ್ಥಗಿತಗೊಳಿಸದೇ ತಿಂಡಿ, ಊಟವನ್ನು ಪಾರ್ಸಲ್ ನೀಡಲಾಗುತ್ತಿತ್ತು. ಆದರೆ ಇದೀಗ  ಸರಕಾರ ಮೂರೂ ಹೊತ್ತು ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಆಹಾರ ವಿತರಣೆ ಘೋಷಿಸಿದ್ದು, ಗುರುವಾರದಿಂದಲೇ ಭಟ್ಕಳದಲ್ಲಿ ಸರಕಾರದ ಆದೇಶವನ್ನು ಪಾಲಿಸಲಾಗಿದ್ದು, ಅನುಕೂಲವಾಗಿದೆ.

ಈ ಕುರಿತು ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ದೇವರಾಜ ಅವರು ಸರಕಾರದ ಆದೇಶದಂತೆ ಭಟ್ಕಳ ಇಂದಿರಾ ಕ್ಯಾಂಟೀನ್‍ನಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಉಚಿತ ಆಹಾರ ವಿತರಣೆ ಆರಂಭಿಸಲಾಗಿದೆ ಎಂದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News