ಪುಣೆ: 270 ಬ್ಲ್ಯಾಕ್ ಫಂಗಸ್ ಪ್ರಕರಣ ವರದಿ

Update: 2021-05-14 18:55 GMT

ಪುಣೆ: ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ ಅಥವಾ ಮ್ಯೂಕೋರ್ಮೈಕೋಸಿಸ್) ಎಂಬ ಅಪರೂಪದ ಆದರೆ ಅತ್ಯಂತ ಅಪಾಯಕಾರಿಯಾದ ಶಿಲೀಂಧ್ರ ಸೋಂಕು ರೋಗದ 270 ಪ್ರಕರಣ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವರದಿಯಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ  ರೋಗಿಗಳ ಆರೈಕೆಗಾಗಿ ಆಸ್ಪತ್ರೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಜಾರಿಗೊಳಿಸಿರುವ ಜೊತೆಗೆ ಒಂದು ಕಾರ್ಯಪಡೆಯನ್ನೂ ನೇಮಿಸಿದೆ ಎಂದು ವರದಿಯಾಗಿದೆ.

ಕೊರೋನ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಕೆಲವರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗು ಕಟ್ಟಿರುವುದು ಅಥವಾ ಭಾಗಶಃ ದೃಷ್ಟಿ ಕಳೆದುಕೊಳ್ಳುವುದು ಈ ಸೋಂಕಿನ ಲಕ್ಷಣವಾಗಿದೆ. ಮೆದುಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ಮಧುಮೇಹ ರೋಗಿಗಳು ಅಥವಾ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದರಿಂದ ಪ್ರಾಣಕ್ಕೆ ಅಪಾಯ ಬರಬಹುದು.

ಪುಣೆ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಇದುವರೆಗೆ ಈ ಸೋಂಕಿನ 270 ಪ್ರಕರಣ ವರದಿಯಾಗಿದೆ ಎಂದು ಪುಣೆಯ ಜಿಲ್ಲಾಧಿಕಾರಿ ಸೌರಭ್ ರಾವ್ ಹೇಳಿದ್ದಾರೆ. ಮ್ಯೂಕೋರ್ಮೈಕೋಸಿಸ್ ಸೋಂಕಿತರ ಆರೈಕೆ ಮತ್ತು ಚಿಕಿತ್ಸೆಗೆ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್ಒಪಿ)ಗಳನ್ನು ಪುಣೆಯ ವಿಭಾಗೀಯ ಕಾರ್ಯಪಡೆಯ ಸದಸ್ಯ ಡಾ. ಭರತ್ ಪುರಂದರೆ ರೂಪಿಸಿದ್ದು ಇದನ್ನು ಕಾರ್ಯಪಡೆ ಪರಿಶೀಲಿಸಿದೆ. ಎಸ್ಒಪಿಗಳನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ರವಾನಿಸಲಾಗುವುದು.  ಎಸ್ಒಪಿಯಲ್ಲಿ ಸೂಚಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.

ಸೋಂಕಿತರ ವೈದ್ಯಕೀಯ ನಿರ್ವಹಣೆ, ಚಿಕಿತ್ಸೆಯ ಶಿಷ್ಟಾಚಾರ, ರೋಗಿಯ ನಿರ್ವಹಣೆ, ಶಸ್ತ್ರಚಿಕಿತ್ಸೆ, ಔಷಧ ಇತ್ಯಾದಿಗಳ ಮಾಹಿತಿಯನ್ನು ಎಸ್ಒಪಿ ಒಳಗೊಂಡಿರುತ್ತದೆ. ಇದೊಂದು ಅಪರೂಪದ ಫಂಗಸ್ ಸೋಂಕು. ಕೋವಿಡ್-19 ಪತ್ತೆಯಾಗುವ ಮೊದಲೂ ಅಲ್ಲೊಂದು ಇಲ್ಲೊಂದು ಪ್ರಕರಣ ದಾಖಲಾಗಿತ್ತು. ಕೋವಿಡ್ನ ಪ್ರಥಮ ಅಲೆಯಲ್ಲಿ ಸುಮಾರು 5 ಪ್ರಕರಣ ದಾಖಲಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಗಂಭೀರ ರೂಪದಲ್ಲಿದೆ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News