ಎಪ್ರಿಲ್‌ ನಲ್ಲಿ ಉದ್ಯೋಗ ಕಳೆದುಕೊಂಡ 34 ಲಕ್ಷ ಮಂದಿ ಸಂಬಳ ಪಡೆಯುವ ನೌಕರರು !

Update: 2021-05-15 09:28 GMT

ಹೊಸದಿಲ್ಲಿ: ಕೋವಿಡ್‌ ನ ಮೊದಲ ಅಲೆಯಲ್ಲೇ ಕಷ್ಟಪಟ್ಟಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಳಿಕ ಎರಡನೇ ಅಲೆಗೂ ತೀವ್ರವಾಗಿ ತತ್ತರಿಸಿರುವುದರ ಪರಿಣಾಮ ಎಪ್ರಿಲ್‌ ತಿಂಗಳೊಂದರಲ್ಲೇ 34 ಲಕ್ಷ ಮಂದಿ ಸಂಬಳ ಪಡೆಯುವ ನೌಕರರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು telegraphindia.com ವರದಿ ಮಾಡಿದೆ.

ಖಾಸಗಿ ಸಂಶೋಧನಾ ಸಮೂಹ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಪ್ರಕಾರ, ಏಪ್ರಿಲ್‌ನಲ್ಲಿ ಒಟ್ಟು 73.5 ಲಕ್ಷ ಉದ್ಯೋಗಗಳು ನಷ್ಟವಾಗಿದ್ದು, ನಿರುದ್ಯೋಗ ದರವು ಮಾರ್ಚ್‌ನಲ್ಲಿ ಶೇ 6.5 ರಿಂದ ಶೇ 7.97 ಕ್ಕೆ ಏರಿದೆ.

ಲಾಕ್‌ ಡೌನ್‌ಗಳು ಮತ್ತು ಆರ್ಥಿಕ ಕುಸಿತವು ಗ್ರಾಮೀಣ ಪ್ರದೇಶದ ಸಣ್ಣ ಉದ್ಯಮಗಳನ್ನು ಧ್ವಂಸಗೊಳಿಸಿದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ.

"ಕಳೆದ ವರ್ಷ, ಆರ್ಥಿಕತೆಯು ತೀವ್ರತರದ ಆಘಾತವನ್ನು ಅನುಭವಿಸಿತು. ಅದು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮೊದಲು, ಕೋವಿಡ್‌ನ ಎರಡನೇ ಅಲೆಯು ಮತ್ತೆ ಗಮನಾರ್ಹ ಆಘಾತವನ್ನು ಉಂಟುಮಾಡಿತು,” ಎಂದು ವ್ಯಾಸ್ ಹೇಳಿದರು.

"ಆರ್ಥಿಕತೆಯು ಶೀಘ್ರವಾಗಿ ಮತ್ತು ದೃಢವಾಗಿ ಪುಟಿದೆದ್ದರೆ, ಈ ಉದ್ಯಮಗಳಿಗೆ ಮತ್ತೆ ಜೀವ ಬರಬಹುದು. ಆದರೆ ಈಗ ಯಾವುದೇ ಭರವಸೆ ಕಾಣುತ್ತಿಲ್ಲ.” ಎಂದು ಅವರು ಹೇಳಿದ್ದಾರೆ.

ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿ 2020 ರ ಡಿಸೆಂಬರ್ ಅಂತ್ಯದಲ್ಲಿ ಭಾರತವು 38.877 ಕೋಟಿ ಉದ್ಯೋಗಿಗಳನ್ನು ಹೊಂದಿತ್ತು. ಜನವರಿ ಅಂತ್ಯದ ವೇಳೆಗೆ ಈ ಸಂಖ್ಯೆ 40.07 ಕೋಟಿಗೆ ಏರಿತ್ತು. ಆದರೆ ಫೆಬ್ರವರಿ ವೇಳೆಗೆ 39.821 ಕೋಟಿ, ಮಾರ್ಚ್ ವೇಳೆಗೆ 39.814 ಕೋಟಿ ಮತ್ತು ಏಪ್ರಿಲ್ ಅಂತ್ಯದ ವೇಳೆಗೆ 39.079 ಕೋಟಿಗೆ ಇಳಿದಿದೆ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News