ನಿರ್ಗತಿಕರಿಗೆ ನೆರವಾಗುವ ಹಂಝ ಬಸ್ತಿಕೋಡಿ

Update: 2021-05-15 12:46 GMT

ಬಂಟ್ವಾಳ : ರಾಜ್ಯದಲ್ಲಿ ತಾಂಡವವಾಡುತ್ತಿರುವ ಕೊರೋನ ಸೋಂಕು ಇನ್ನಷ್ಟು ಹರಡುವುದನ್ನು ನಿಯಂತ್ರಿಸಲು ಸರಕಾರ ಹೇರಿರುವ ಕಠಿಣ ಕರ್ಫ್ಯೂ, ಲಾಕ್ ಡೌನ್ ನಿಂದ ಹಸಿವು ಮತ್ತು ತೀವ್ರ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು, ದಾರಿಹೋಕರಿಗೆ ಪ್ರತಿದಿನ ಒಂದೊತ್ತಿನ ಊಟವನ್ನು ಪೂರೈಸುವ ಮೂಲಕ ಸಮಾಜ ಸೇವಕ ಹಂಝ ಬಸ್ತಿಕೋಡಿ ನೆರವಾಗುತ್ತಿದ್ದಾರೆ. 

ಬಂಟ್ವಾಳ ತಾಲೂಕಿನ ವಾಮದ ಪದವು ಬಸ್ತಿಕೋಡಿ ನಿವಾಸಿ, ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಇರುವ ಹೆಸರಾಂತ ಆನಿಯಾ ದರ್ಬಾರ್ ಹೊಟೇಲ್ ಮಾಲಕರಾದ ಹಂಝ ಬಸ್ತಿಕೋಡಿ ಅವರು ನಿರ್ಗತಿಕರಿಗೆ ಊಟ ತಲುಪಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. 

ಸರಕಾರದ ಕಠಿಣ ಕರ್ಫ್ಯೂ, ಲಾಕ್ ಡೌನ್ ಕ್ರಮಗಳಿಂದ ಹಲವು ಉದ್ಯಮಗಳು ನೆಲಕಚ್ಚಿದೆ. ಉದ್ಯೋಗ ಕಳೆದುಕೊಂಡು ಹಲವರ ಜೀವನ ತತ್ತರಿಸಿ ಹೋಗಿದೆ. ಬಡವರು, ನಿರ್ಗತಿಕರು, ದಾರಿಹೋಕರ ಜೀವನ ನರಕದಂತಾಗಿದೆ. ಅಂಗಡಿ ಹೊಟೇಲುಗಳಿಗೆಲ್ಲಾ ಸಮಯ ನಿಗದಿ ಪಡಿಸಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಕರವಾಗಿದೆ.

ಕೊರೋನ ಭಯದಿಂದ ಯಾರೂ ಪರಸ್ಪರ ಹತ್ತಿರ ಸುಳಿಯದ ಈ ಸಮಯದಲ್ಲಿ ಹಂಝ ಅವರು ಬಿ.ಸಿ.ರೋಡ್ ಬಸ್ ನಿಲ್ದಾಣ, ರೈಲು ನಿಲ್ದಾಣ, ಸೇತುವೆಯಡಿ ಸಹಿತ ಬಿ.ಸಿ.ರೋಡ್ ಮತ್ತು ಬಂಟ್ವಾಳ ಪರಿಸರದಲ್ಲಿ ದಿನ ದೂಡುತ್ತಿರುವ ಬಡವರು, ನಿರ್ಗತಿಕರು, ದಾರಿಹೋಕರ ಹಸಿವು ನೀಗಿಸುತ್ತಿದ್ದಾರೆ‌. ಲಾಕ್ ಡೌನ್ ಸಮಯದಲ್ಲಿ ಹೊಟೇಲ್ ತೆರೆಯಲು ಅವಕಾಶ ಇರುವುದರಿಂದ ತನ್ನ ಹೊಟೇಲ್ ನಲ್ಲಿ ಊಟ ತಯಾರಿಸಿ ಸ್ವಂತ ತನ್ನ ಕಾರಿನಲ್ಲಿ ತೆರಳಿ ಊಟ ವಿತರಿಸುತ್ತಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಗೆ ಮೊದಲು ರಾಜ್ಯ ಸರಕಾರ ಹೇರಿದ್ದ ಕೋವಿಡ್ ಕರ್ಫ್ಯೂ ಆರಂಭದಲ್ಲೇ ಹಂಝ ಅವರು ನಿರ್ಗತಿಕರಿಗೆ ಊಟ ವಿತರಿಸುವ ಕಾರ್ಯವನ್ನು ಆರಂಭಿಸಿದ್ದು ಈಗಲೂ ಮುಂದುವರಿಸಿದ್ದಾರೆ. ಪ್ರತಿದಿನ 25ರಿಂದ 30ರಷ್ಟು ಮಂದಿಗೆ ರಾತ್ರಿಯ ಊಟವನ್ನು ವಿತರಿಸುತ್ತಿದ್ದಾರೆ.

ಸಮಾಜ ಸೇವೆಯಲ್ಲಿ ಮುಂಚೂನಿಯಲ್ಲಿ ಇರುವ ಎಂ.ಫ್ರೆಂಡ್ಸ್ ಸಂಸ್ಥೆಯ ಸದಸ್ಯರೂ ಆಗಿರುವ ಹಂಝ ಬಸ್ತಿಕೋಡಿ ಅವರು ವಿವಿಧ ಸಂಸ್ಥೆಗಳ ಜೊತೆಗೂಡಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಲಾಕ್ ಡೌನ್ ನ ಪರಿಣಾಮ ಊಟ ತಿಂಡಿ ಇಲ್ಲದವರಿಗೆ ಊಟ, ತಿಂಡಿ ನೀಡಿ ನೆರವಾಗುತ್ತಿದ್ದಾರೆ.

ಬಿ.ಸಿ.ರೋಡ್ ಮತ್ತು ಬಂಟ್ವಾಳ ಪರಿಸರದಲ್ಲಿ ಇರುವ ಬಡವರು, ನಿರ್ಗತಿಕರು, ದಾರಿಹೋಕರಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಊಟವನ್ನು ವಿವಿಧ ಸಂಘ ಸಂಸ್ಥೆಗಳು, ಪಕ್ಷಗಳ ವತಿಯಿಂದ ನೀಡಲಾಗುತ್ತಿದೆ. ಆದರೆ ರಾತ್ರಿಯ ಊಟ ಯಾರೂ ಪೂರೈಸುತ್ತಿಲ್ಲ. ಇದನ್ನು ಮನಗಂಡು ಕೋವಿಡ್ ಕರ್ಫ್ಯೂ ಸಮಯದಿಂದ ಆರಂಭಿಸಿ ಇಂದಿನವರೆಗೂ ಪ್ರತಿ ದಿನ ರಾತ್ರಿಯಾಗುತ್ತಿದ್ದಂತೆ ಊಟವನ್ನು ಪ್ಯಾಕ್ ಮಾಡಿ ಹಂಝ ಬಸ್ತಿಕೋಡಿ ಸ್ವಂತ ತಾನೇ ತೆರಳಿ ವಿತರಿಸುತ್ತಿದ್ದಾರೆ‌.

ಹಂಝ ಬಸ್ತಿಕೋಡಿ ಅವರ ಈ ಸಮಾಜ ಸೇವೆ ಮೊದಲ ಬಾರಿಯೇನಲ್ಲ. ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲೂ ಪ್ರತಿದಿನ ನಿರ್ಗತಿಕರಿಗೆ ಊಟ ನೀಡುತ್ತಿದ್ದರಲ್ಲದೆ ಹಲವು ಬಡ ಕುಟುಂಬಗಳಿಗೆ ದಿನನಿತ್ಯ ಉಪಯೋಗಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

''ಹಂಝ ಬಸ್ತಿಕೋಡಿ ಅವರ ಜೀವನವೇ ಒಂದು ಸಮಾಜ ಸೇವೆ. ಅದನ್ನು ಅವರು ಅವರ ತಂದೆ ಮತ್ತು ಹಿರಿಯರಿಂದ ಕಲಿತಿದ್ದಾರೆ. ಯಾವುದೇ ಪ್ರಚಾರ, ಪ್ರತಿಫಲ ಬಯಸದೆ ಅವರು ಸಮಾಜ ಸೇವೆಯ ಮುಂಚೂಣಿಯಲ್ಲಿ ಇದ್ದಾರೆ. ಬಿ.ಸಿ.ರೋಡಿನಲ್ಲಿ ಅವರ ಮಾಲಕತ್ವದ ಹೊಟೇಲ್ ನಲ್ಲಿ ಉತ್ತಮ ಆಹಾರವನ್ನು ಮಿತದರದಲ್ಲಿ ಜನರಿಗೆ ನೀಡುತ್ತಿರುವುದು ನಾನು ಕಂಡ ಅವರ ಅತೀ ದೊಡ್ಡ ಸಮಾಜ ಸೇವೆಯಾಗಿದೆ''. 

- ಸದಾಶಿವ ಬಂಗೇರ, ಬೂಡಾ ಮಾಜಿ ಅಧ್ಯಕ್ಷ

Full View

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News