ಧನಿ ಆ್ಯಪ್‍ನಿಂದ 25 ಲಕ್ಷ ಕುಟುಂಬಗಳಿಗೆ ಕೋವಿಡ್ ಕಿಟ್
ಮಂಗಳೂರು: ಕೊರೋನ ವೈರಸ್‍ನ ಎರಡನೇ ಅಲೆಯಿಂದ ತತ್ತರಿಸಿರುವ ನಾಗರಿಕರಿಗೆ ಸಹಾಯ ಹಸ್ತ ಚಾಚಿರುವ ಇಂಡಿಯಾ ಬುಲ್ಸ್ ಸಮೂಹದ ಡಿಜಿಟಲ್ ಆ್ಯಪ್ ಆಧರಿತ ಆರೋಗ್ಯ ಆರೈಕೆ ಸೇವೆ 'ಧನಿ ಆ್ಯಪ್' 90 ಲಕ್ಷ ರೂ. ಮೌಲ್ಯದ ಉಚಿತ ಕೋವಿಡ್ ಕೇರ್ ಆರೋಗ್ಯ ಕಿಟ್‍ಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆಯ 25 ಲಕ್ಷ ಕುಟುಂಬಗಳಿಗೆ ವಿತರಿಸಲು ನಿರ್ಧರಿಸಿದೆ.
ಪ್ರತಿಯೊಂದು ಕಿಟ್‍ನಲ್ಲಿ ಇಬ್ಬರಿಗೆ ಸಾಕಾಗುವಷ್ಟು ಪ್ರತಿಬಂಧಕ ಔಷಧಗಳು ಸೇರಿದಂತೆ ಅಗತ್ಯ ಸುರಕ್ಷಾ ಸಾಧನಗಳು ಒಳಗೊಂಡಿದ್ದು, ಈಗಾಗಲೇ ಕಿಟ್ ವಿತರಣೆ ಆರಂಭವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಶಿಫಾರಸ್ಸಿನಂತೆ ಈ ಕಿಟ್ ಪ್ಯಾಕ್ ಮಾಡಲಾಗಿದ್ದು, ಇದು ಕೋವಿಡ್-19 ಆರಂಭಿಕ ಪ್ರತಿಬಂಧಕ ಆರೈಕೆಗೆ ಸಹಕಾರಿಯಾಗಲಿದೆ.
ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ಝಿಂಕ್ ಮೂಲಕ ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಜ್ವರ ಅಥವಾ ಮೈ ಕೈ ನೋವು ಇದ್ದರೆ ಪಾರಾಸಿಟಮೋಲ್ ಔಷಧಿ ಒಳಗೊಂಡಿದೆ. ಈ ಉಪಕ್ರಮದ ಪ್ರಯೋಜನ ಪಡೆಯಲು ಇಚ್ಛಿಸುವ ಕುಟುಂಬಗಳು ಧನಿ ಆ್ಯಪ್ ಅಥವಾ pharmacy.dhani.com ನಲ್ಲಿ ಲಾಗ್ ಇನ್ ಮಾಡಿ ಉಚಿತವಾಗಿ ಆರ್ಡರ್ ಮಾಡಬಹುದು. ಧನಿ ದಿನದ 24 ಗಂಟೆಯೂ ವೈದ್ಯರು ಮತ್ತು ವಿಶೇಷ ತಜ್ಞರೊಂದಿಗೆ ಉಚಿತ ವಿಡಿಯೊ ಕರೆ ಸೌಲಭ್ಯವನ್ನು ನೀಡುತ್ತದೆ ಹಾಗೂ ವಿಡಿಯೊ ಕರೆ ಮೂಲಕ ಪ್ರತಿ ವ್ಯಕ್ತಿ 15 ಸೆಕೆಂಡ್ ಉಚಿತ ಸಲಹೆ ಪಡೆಯಬಹುದಾಗಿದೆ ಎಂದು ಧನಿ ಹೆಲ್ತ್‍ಕೇರ್ ಅಧ್ಯಕ್ಷ ನಿಖಲ್ ಚಾರಿ ಹೇಳಿದ್ದಾರೆ.
"ಧನಿ ನಿಮ್ಮ ಜತೆಯಲ್ಲಿ" ಎಂಬ ಈ ವಿಶೇಷ ಉಪಕ್ರಮದಡಿ, ಧನಿ ಆ್ಯಪ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಉಚಿತ ಸಮಾಲೋಚನೆ ಸೇವೆಯನ್ನು ಪಡೆಯಲು ಕೂಡಾ ಧನಿ ಆ್ಯಪ್ ಅವಕಾಶ ಕಲ್ಪಿಸಿದೆ ಎಂದು ವಿವರಿಸಿದ್ದಾರೆ.